ಮೈಸೂರು: ‘ಹೊರ ದೇಶಗಳಿಂದ ಸರಕು ಆಮದು ಪ್ರಮಾಣವನ್ನು ತಗ್ಗಿಸಿ, ದೇಶೀಯವಾಗಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ’ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಸ್. ಬಾಬು ನಾಗೇಶ್ ಹೇಳಿದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ವತಿಯಿಂದ ಕೈಗಾರಿಕೋದ್ಯಮಿಗಳು ಹಾಗೂ ವಾಣಿಜೋದ್ಯಮಿಗಳಿಗಾಗಿ ಆಯೋಜಿಸಿರುವ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಅವರು ಉದ್ಘಾಟಿಸಿದರು.
‘ಉತ್ತಮ ರಫ್ತುದಾರರಾಗಬೇಕಾದರೆ ಮೊದಲು ಮಾರುಕಟ್ಟೆಯನ್ನು ಅಧ್ಯಯನ ಮಾಡಬೇಕು. ಇಂದಿನ ವಾತಾವರಣದಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು ಸರಕುಗಳನ್ನು ಉತ್ಪಾದನೆ ಮಾಡುವುದು ಜಾಣತನ’ ಎಂದು ಕಿವಿಮಾತು ಹೇಳಿದರು.
‘ದೇಶದ ರಫ್ತಿನ ಸೇವೆಯಲ್ಲಿ ಕರ್ನಾಟಕದ ಪಾಲು ಶೇ 41ರಷ್ಟಿದ್ದು, ಸರಕು ರಫ್ತಿನಲ್ಲಿ ಅಗ್ರಸ್ಥಾನದಲ್ಲಿದೆ. ಸರಕು ಆಮದಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದ ರಫ್ತು ಉದ್ಯಮವನ್ನು ಹೆಚ್ಚಿಸುವುದು ಈ ತರಬೇತಿಯ ಮೂಲ ಉದ್ದೇಶವಾಗಿದೆ. ರಫ್ತು ಹೆಚ್ಚು ಮಾಡುವುದಕ್ಕೆ ಬೇಕಾದ ಅಗತ್ಯ ಬೆಂಬಲವನ್ನು ಸಂಸ್ಥೆಯು ಒದಗಿಸಲಿದೆ’ ಎಂದರು.
ಮೈಸೂರು ಜಿಲ್ಲಾ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ‘ರಫ್ತು ಉದ್ಯಮ ಎಂಬುದು ಸವಾಲು ಕ್ಷೇತ್ರವಾಗಿದೆ. ಮೊದಲು ಸ್ವದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿ, ನಂತರದಲ್ಲಿ ಹೆಚ್ಚು ರಫ್ತು ಮಾಡಬೇಕು. ಬೇರೆ ಬೇರೆ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಶಿವಾಜಿರಾವ್, ವಿಟಿಪಿಸಿ ಕಾರ್ಯಕ್ರಮ ಸಂಯೋಜಕ ಅರವಿಂದ್ ಭಟ್, ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಎಲ್. ಮೇಘಲಾ ಇದ್ದರು.
ಬೆಂಗಳೂರು, ಮೈಸೂರು, ಶಿವಮೊಗ್ಗ, ಬಾಗಲಕೋಟೆ ಮೊದಲಾದ ಜಿಲ್ಲೆಗಳ ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.