
ತಿ.ನರಸೀಪುರ: ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜ.10 ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರದ ಡಾ. ರಾಜಕುಮಾರ್ ಕಲಾ ಮಂದಿರದಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ‘ಅನ್ನದಾತ’ ಸಂಸ್ಮರಣ ಗ್ರಂಥ ಬಿಡುಗಡೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಂದು ರೈತರ ಹಕ್ಕುಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಂಡು ಅವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸಿ, ರೈತ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು’ ಎಂದರು.
ಕೃಷಿ ಉತ್ಪಾದನೆ–ಮಾರಾಟ, ರೈತರ ಆರ್ಥಿಕ ಅಭಿವೃದ್ಧಿ, ಬೆಳೆಗಳಿಗೆ ಎದುರಾಗುವ ಸಮಸ್ಯೆಗಳು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ–ಪರಿಹಾರಗಳ ಕುರಿತು ಚಿಂತನ–ಮಂಥನ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳು, ವಿಶೇಷ ಉಪನ್ಯಾಸಗಳು ಹಾಗೂ ಸಂವಾದಗಳು ನಡೆಯಲಿವೆ ಎಂದರು.
‘ಪ್ರತಿ ಟನ್ ಕಬ್ಬಿಗೆ ₹4 ಸಾವಿರ ದರ ನಿಗದಿ, ಕಟಾವು ಹಾಗೂ ಸಾಗಣೆಕೆ ವೆಚ್ಚ ಹೊರತುಪಡಿಸಿ ದರ ಘೋಷಣೆ, ಕಾರ್ಖಾನೆಗಳ ಮುಂದೆ ತೂಕ ಯಂತ್ರ ಅಳವಡಿಕೆ, ಇಳುವರಿ ವಂಚನೆ ತಡೆಯಲು ಪ್ರಯೋಗಾಲಯ ಸ್ಥಾಪನೆ, ರೈತರು–ಸಕ್ಕರೆ ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ , ಕಾರ್ಖಾನೆಗಳ ಲಾಭಾಂಶದಲ್ಲಿ ರೈತರಿಗೆ ಹಂಚಿಕೆ, ಕಬ್ಬಿನ ಎಫ್.ಆರ್.ಪಿ. ದರ ಹೊಲದಲ್ಲಿ ನಿಗದಿ, ಬೆಳೆ ವಿಮೆ ಮಾನದಂಡ ಪದ್ಧತಿ ಬದಲಾವಣೆ, ಹೊಲ ಆಧಾರಿತ ವಿಮೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಕ್ಕೊತ್ತಾಯ ಮಾಡಲಾಗುವುದು’ ಎಂದು ತಿಳಿಸಿದರು.
ಮಠಾಧೀಶರು, ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ರಾಜ್ಯ ಹಾಗೂ ಅಂತರರಾಜ್ಯಗಳ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ರೈತ ಮುಖಂಡರು ಸಮಾವೇಶದಲ್ಲಿ ನಾಡಿನ ಭಾಗವಹಿಸಲಿದ್ದಾರೆ. ರಾಜ್ಯ ಹಾಗೂ ಇತರ ರಾಜ್ಯಗಳಿಂದ ರೈತ ಪ್ರತಿನಿಧಿಗಳು, ರೈತ ಪರ ಚಿಂತಕರು, ತಾಂತ್ರಿಕ ತಜ್ಞರು, ಬೀಜ ಮಾರಾಟಗಾರರು, ಕೃಷಿ ಔಷಧ ತಯಾರಕರು ಹಾಗೂ ಸಾರ್ವಜನಿಕರು ಭಾಗವಹಿಸುವರು ಎಂದರು. ಪೋಸ್ಟರ್ ಬಿಡುಗಡೆ ಮಾಡಲಾಯಿತು.
ರಾಜ್ಯ ಗೌರವಾಧ್ಯಕ್ಷ ಹಂಡುವಿನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಮುಖಂಡರಾದ ಕುರುಬೂರು ಶಾಂತರಾಜು, ತಾಲ್ಲೂಕು ಅಧ್ಯಕ್ಷ ಸುಜ್ಜಲೂರು ಜಯಸ್ವಾಮಿ, ನಾಡನಹಳ್ಳಿ ಮಲ್ಲು, ರಾಜು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.