
ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಧ್ಯಾನದ ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು
– ಪ್ರಜಾವಾಣಿ ಚಿತ್ರ
ಮೈಸೂರು: ಚಾಮುಂಡಿ ಬೆಟ್ಟ, ಮಾನಸಗಂಗೋತ್ರಿಯ ಬಯಲು ರಂಗಮಂದಿರ, ವಿಜಯನಗರದ ಜಗನ್ನಾಥ ಸಾಂಸ್ಕೃತಿಕ ಕಲಾ ಕೇಂದ್ರ ಸೇರಿದಂತೆ ವಿವಿಧೆಡೆ ಭಾನುವಾರ ‘ವಿಶ್ವ ಧ್ಯಾನ ದಿನ’ವನ್ನು ಆಚರಿಸಲಾಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಆಯೋಜಿಸಿದ್ದ ಸಾಮೂಹಿಕ ಧ್ಯಾನದಲ್ಲಿ ಮುಂಜಾನೆ 5ರಿಂದಲೇ ಆಗಮಿಸಿದ ನೂರಾರು ಮಂದಿ ಕೊರೆಯುವ ಚಳಿ ನಡುವೆಯೇ ಧ್ಯಾನ ಮಾಡಿ, ಅದರ ಮಹತ್ವ ಸಾರಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ, ‘ದಿನ ನಿತ್ಯದ ಜಂಜಾಟದಲ್ಲಿ ದೊಡ್ಡವರಿಂದ ಚಿಕ್ಕಮಕ್ಕಳವರೆಗೂ ಆರೋಗ್ಯಕ್ಕಾಗಿ ಧ್ಯಾನ ಅತ್ಯವಶ್ಯವಾಗಿದೆ’ ಎಂದು ತಿಳಿಸಿದರು.
‘ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಪರಸ್ಪರ ಸದ್ಭಾವನೆ ಇರಬೇಕು. ಧ್ಯಾನದಿಂದ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ. ಮನದ ದ್ವೇಷಾಸೂಯೆ ಕಳೆಯುವ ಅದು, ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರೀತಿ, ಕರುಣೆ, ಸಹೋದರತ್ವ ಬೆಳೆಸಲು ಸಹಕಾರಿಯಾಗಿದೆ. ಈಗಿನ ದಿನಗಳಲ್ಲಿ ಹಣ, ಆಸ್ತಿ, ಸಂಪಾದನೆಗಿಂತ ಮನಸ್ಸಿನ ಆರೋಗ್ಯ ಮತ್ತು ಶಾಂತಿ ಬಹಳ ಮುಖ್ಯವಾಗಿದೆ. ಸಾರ್ವಜನಿಕರು ಇಂಥ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪ ವಲಯದ ಮುಖ್ಯಸಂಚಾಲಕಿ ಲಕ್ಷ್ಮೀಜಿ ಪಾಲ್ಗೊಂಡಿದ್ದರು.
ಬೆಟ್ಟದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ್ದ ‘ಸಾಮೂಹಿಕ ಧ್ಯಾನ’ದಲ್ಲಿ ದೇಗುಲದ ಸಿಬ್ಬಂದಿ, ಭಕ್ತರು ಪಾಲ್ಗೊಂಡರು. ಕಾರ್ಯದರ್ಶಿ ಎಂ.ಜೆ.ರೂಪಾ ಚಾಲನೆ ನೀಡಿದರು. ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.