ಮೈಸೂರು: ಸಮಾಜದ ಎದುರು ಸತ್ಯ ನುಡಿಯುವ, ತಪ್ಪುಗಳ ತಿದ್ದುವ, ಕುಸಿಯುತ್ತಿರುವ ಮೌಲ್ಯವನ್ನು ಪಠ್ಯ, ಸಂಗೀತ, ನಟನೆ ಸೇರಿದಂತೆ ಸೃಜನಾತ್ಮಕವಾಗಿ ಮೇಲೆತ್ತುವ ಜವಾಬ್ದಾರಿ ‘ರಂಗಭೂಮಿ’ಗಿದೆ. ಈ ಜವಾಬ್ದಾರಿಯನ್ನು ಉಸಿರಾಡುತ್ತಿರುವ ಸೋದರರು ಒಂದೇ ಜೀವದಂತೆ ‘ರಂಗ ತೇರು’ ಎಳೆಯುತ್ತಿದ್ದಾರೆ.
ಸಾಗರದ ಹೆಗ್ಗೂಡಿನ ‘ನೀಲಕಂಠೇಶ್ವರ ನಾಟ್ಯಸೇವಾ ಸಂಘ’ದ (ನೀನಾಸಂ) ರಂಗಶಿಕ್ಷಣ ಕೇಂದ್ರದಲ್ಲಿ ರಂಗಕಲೆಯಲ್ಲಿ ಡಿಪ್ಲೊಮಾ ಪಡೆದಿರುವ ಶ್ರೀಧರ ಹೆಗ್ಗೋಡು ಹಾಗೂ ದಿಗ್ವಿಜಯ ಹೆಗ್ಗೋಡು ದಶಕಗಳಿಂದಲೂ ರಂಗಭೂಮಿಯನ್ನೇ ಧೇನಿಸುತ್ತಿದ್ದಾರೆ.
ಬಾಲ್ಯದಲ್ಲಿ ನೀನಾಸಂನ ನಾಟಕಗಳನ್ನು ನೋಡುತ್ತಲೇ ಬೆಳೆದರು. ರಂಗ ಭೀಷ್ಮ ಬಿ.ವಿ.ಕಾರಂತರು ನಿರ್ದೇಶಿಸಿದ ನಾಟಕಗಳಲ್ಲಿ ಇವರ ‘ಪುಟಾಣಿ’ ಹಾಜರಿಯೂ ಇತ್ತು. ಪು.ತಿ.ನರಸಿಂಹಚಾರ್ ಅವರ ‘ಗೋಕುಲ ನಿರ್ಗಮನ’ ನಾಟಕದಲ್ಲಿ ತಾಯಿ ಅನುಸೂಯಾ ಅವರು ರಂಗ ಸಜ್ಜಿಕೆಯಲ್ಲಿ ನೆರವಾಗುತ್ತಿದ್ದರೆ, ಮ್ಯೂಸಿಕ್‌ಪಿಟ್‌ನಲ್ಲಿ ಇವರು ವಾದ್ಯ ನುಡಿಸುತ್ತಲೊ, ಹಾಡುತ್ತಲೊ ‘ರಂಗ ಸಂಗೀತ’ದ ಹೆಜ್ಜೆಗಳನ್ನು ಇಡುತ್ತಿದ್ದರು.
ಶ್ರೀಧರ 9ನೇ ತರಗತಿ ಹಾಗೂ ದಿಗ್ವಿಜಯ 7ನೇ ತರಗತಿ ಓದುತ್ತಿರುವಾಗ ತಬಲಾ, ಹಾರ್ಮೋನಿಯಂ ಅಲ್ಲದೇ ಸಂಗೀತ ವಾದ್ಯಗಳಲ್ಲದ ತೆಂಗಿನ ಕರಟ, ಬಿದಿರಿನ ಬಂಬು, ಲೊಳಗ, ಲೊಟ್ಟೆ, ತಟ್ಟೆ ಮೊದಲಾದ ಅವಾದ್ಯಗಳಲ್ಲೂ ಕಾರಂತರ ಸಂಗೀತಕ್ಕೆ ಜೊತೆಯಾಗುತ್ತಿದ್ದರು. ಕಾರಂತರು ಇವರ ವಾದ್ಯದಾಟವನ್ನು ಮೆಚ್ಚಿಕೊಂಡಿದ್ದರು.
‘ಶಾಲೆಯಿದ್ದರಿಂದ ನೀನಾಸಂ ನಾಟಕ ತಿರುಗಾಟಗಳಿಗೆ ನಾವು ಹೋಗಲು ಆಗುತ್ತಿರಲಿಲ್ಲ. ರಜೆಯಲ್ಲಿದ್ದಾಗ ಕಾರಂತರೇ ಕಳುಹಿಸಿ ಬಿಡುತ್ತಿದ್ದರು. ದೊಡ್ಡ ರಂಗ ಸಂಗೀತ ನಿರ್ದೇಶಕರೊಬ್ಬರಿಗೆ ಈ ಮಕ್ಕಳು ಮಾಡಿದ ಪ್ರಯೋಗವನ್ನೇ ಅಳವಡಿಸಿ ನೋಡಿ ಎಂದು ಕಾರಂತರು ಹೇಳಿದ್ದರು’ ಎಂದು ದಿಗ್ವಿಜಯ ನೆನೆದರು.
ಅಪಘಾತದ ಆಘಾತ: ನೀನಾಸಂನ ನಾಟಕಗಳಿಗೆ ರಂಗಸಂಗೀತವನ್ನು ನೀಡುತ್ತಿದ್ದ ಗಳಿಗೆಯದು. 2006ರ ವೇಳೆ ಇಬ್ಬರೂ ಬೈಕಿನಲ್ಲಿ ಹೋಗುವಾಗ ಅಪಘಾತವಾಯಿತು. ಶ್ರೀಧರ ಅವರ ಬೆನ್ನುಹುರಿಗೆ ತೀವ್ರ ಪೆಟ್ಟಾಯಿತು. ತಲೆ ಹೊರತು ಪಡಿಸಿ ಉಳಿದ ಭಾಗಗಳ ಚಲನೆಯೇ ಅವರಿಗೆ ಇಲ್ಲವಾಯಿತು. ಚಿಕಿತ್ಸೆಗೆ ಕೇರಳಕ್ಕೆ ಹೋಗಬೇಕಾಯಿತು. ಆಗ ಶೀಧರಗೆ ದಿಗ್ವಿಜಯ ಹೆಗಲಾದರು. ಸಂಗೀತ ಪ್ರಯೋಗ– ಬರಹ ಎಲ್ಲಕ್ಕೂ ಒಬ್ಬರಿಗೊಬ್ಬರೂ ಜೊತೆಯಾದರು.
10 ವರ್ಷ ಕೇರಳದ ವೈದ್ಯ ಡಾ.ಅಜಯನ್ ಅವರ ಮನೆಯಲ್ಲಿ ಚಿಕಿತ್ಸೆ ಪಡೆದರು. ಆ ವೇಳೆ 2 ಸಾವಿರ ವರ್ಷ ಇತಿಹಾಸವಿರುವ ಸಂಸ್ಕೃತ ನಾಟಕ ಪ್ರಕಾರವಾದ ‘ಕೂಡಿಯಾಟ್ಟಂ’ ಅನ್ನು ಮಾರ್ಗಿ ಸಂಜೀವ ನಾರಾಯಣ ಚಾಕ್ಯಾರ್ ಅವರಿಂದ ಕಲಿತರು. ಅಲ್ಲಿದ್ದಾಗಲೂ ಕನ್ನಡ ರಂಗ ತಂಡಗಳಿಗೆ ಝೂಮ್, ಆನ್‌ಲೈನ್‌ನಿಂದಲೇ ರಂಗ ಸಂಗೀತವನ್ನು ನೀಡಿದ್ದಾರೆ.
ಕನ್ನಡ ಹಾಗೂ ಮಲಯಾಳಂನ ನೂರಾರು ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಶ್ರೀಧರ್ ಸಂಗೀತ ಹೇಳಿದರೆ, ದಿಗ್ವಿಜಯ ವಾದ್ಯಗಳಲ್ಲಿ ಜೀವ ತುಂಬುವುದು ಸಾಗಿದೆ.
‘ಭಿನ್ನ ಷಡ್ಜ’ವ ಹಿಡಿದು..
2018ರಲ್ಲಿ ದಿಗ್ವಿಜಯ ಅವರು ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರಕ್ಕೆ ಸಂಗೀತ ಶಿಕ್ಷಕರಾಗಿ ಸೇರಿದ ಮೇಲೆ ಇಬ್ಬರೂ ಮೈಸೂರಿನಲ್ಲೇ ನೆಲೆಸಿದ್ದಾರೆ. ‘ಭಿನ್ನ ಷಡ್ಜ’ ಹೆಸರಿನಲ್ಲಿ ನಾಟಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮೌನೇಶ್ ಬಡಿಗೇರ ನಿರ್ದೇಶನದ ‘ಸೂಜಿದಾರ’ ಚಿತ್ರಕ್ಕೆ ಇವರ ಸಂಗೀತವಿದೆ. ಪಾಡ್‌ಕಾಸ್ಟ್ ಹಾಗೂ ಆಡಿಯೊ ಪುಸ್ತಕಗಳಿಗೆ ದನಿಯಾಗಿದ್ದಾರೆ. ನಾಟಕಗಳು ಆಡಿಯೊ ಪುಸ್ತಕಗಳ ಪಟ್ಟಿ ದೊಡ್ಡದು. ಶ್ರೀಧರ ಅವರು ಅನುವಾದ ಸಾಹಿತ್ಯದಲ್ಲೂ ಕಾಣ್ಕೆ ನೀಡಿದ್ದು ನೀನಾಸಂನ ‘ಮಾತುಕತೆ’ ಮತ್ತು ವಿವೇಕ ಶಾನಭಾಗ ಅವರ ‘ದೇಶಕಾಲ’ ಪತ್ರಿಕೆಗಳಿಗೆ ಲೇಖನಗಳನ್ನು ಅನುವಾದಿಸಿದ್ದಾರೆ. ರವೀಂದ್ರನಾಥ ಟ್ಯಾಗೋರರ ‘ಸ್ಟ್ರೇಬಡ್ರ್ಸ್’ ಅನ್ನು ‘ತಿರುಕವಕ್ಕಿಗಳು’ ಹೆನ್ರಿಕ್ ಇಬ್ಸನ್‍ನ 'ಬ್ರ್ಯಾಂಡ್' ಆಂಟನ್ ಚೆಕಾವ್‍ನ ‘ಸೀಗಲ್’ ಅನುವಾದಿಸಿದ್ದಾರೆ. ಕಾನ್ಸ್ಟಾಂಟಿನ್ ಸ್ತಾನಿಸ್ಲಾವಸ್ಕಿಯ ‘ಬಿಲ್ಡಿಂಗ್ ಎ ಕ್ಯಾರೆಕ್ಟರ್’ ಕೃತಿಯನ್ನು ಕನ್ನಡಕ್ಕೆ ‘ಪಾತ್ರ ಪ್ರವೇಶ’ ಆಗಿಸಿದ್ದಾರೆ. ದಿಗ್ವಿಜಯ ಅವರು ರಂಗ ಸಂಗೀತದ ಜೊತೆಗೆ ‘ತುಘಲಕ್’ ‘ಪ್ರಮಿಳಾರ್ಜುನೀಯಂ’ ‘ಚಂದ್ರಹಾಸ' ನಾಟಕ ನಿರ್ದೇಶಿಸಿದ್ದಾರೆ. ಇಬ್ಬರು ಸೋದರರಿಗೂ ‘ಕೂಡಿಯಾಟ್ಟಂ’ ಅನ್ನು ಕನ್ನಡದಲ್ಲಿ ಪ್ರಯೋಗಿಸುವ ಕನಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.