ಮೈಸೂರು: ನಗರದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೋಟೆಲ್ ಮಾಲೀಕರ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಇಲ್ಲಿನ ಅಂಬಾವಿಲಾಸ ಅರಮನೆಯ ಆವರಣದಲ್ಲಿ ವಿವಿಧ ಕಲಾತಂಡಗಳು ಪ್ರದರ್ಶನ ನೀಡಿದವು. ಕೊಡವ ಮಹಿಳೆಯರ ನೃತ್ಯ, ಚಂಡೆ ಮೇಳ, ಡೊಳ್ಳುಕುಣಿತ, ಕಂಸಾಳೆ ಕಲಾವಿದರ ಕಾರ್ಯಕ್ರಮ ಗಮನಸೆಳೆಯಿತು. ಸಂತ ಫಿಲೋಮಿನಾ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಮೈಸೂರಿನಲ್ಲಿ ಪ್ರವಾಸೋದ್ಯಮವೇ ಜೀವಾಳವಾಗಿದೆ. ಇಲ್ಲಿರುವ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ ವಿ.ಎಂ., ಮೈಸೂರು ಸಂಘ–ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಗುಲಾಬಿ, ಮೈಸೂರು ಪಾಕ್ ವಿತರಣೆ:
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಗರದ ಚಾಮರಾಜೇಂದ್ರ ಮೃಗಾಲಯದ ಬಳಿ ಚಾಮುಂಡೇಶ್ವರಿ ಯುವ ಬಳಗದವರು ಪ್ರವಾಸಿಗರಿಗೆ ಮೈಸೂರು ಪಾಕ್ ಹಾಗೂ ಗುಲಾಬಿ ಹೂ ವಿತರಿಸಿ ಶುಭಾಶಯ ಕೋರಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕಾಂಗ್ರೆಸ್ ಮುಖಂಡರಾದ ರಮೇಶ್ ರಾಮಪ್ಪ, ಲೋಕೇಶ್, ಎಸ್.ಎನ್. ರಾಜೇಶ್, ರವಿಚಂದ್ರ, ಕಡಕೊಳ ಶಿವು, ದಿನೇಶ್, ಮಹಾನ್ ಶ್ರೇಯಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.