ADVERTISEMENT

ಉದಾತ್ತ ಚಿಂತನೆ, ಹೋರಾಟಕ್ಕೆ ಸಾವಿಲ್ಲ: ಲೇಖಕ ಜಗದೀಶ ಕೊಪ್ಪ

ಸುಂದರಲಾಲ ಬಹುಗುಣ ಕುರಿತ 'ಅಪ್ಪಿಕೋ' ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 6:40 IST
Last Updated 18 ಸೆಪ್ಟೆಂಬರ್ 2022, 6:40 IST
ಮೈಸೂರಿನಲ್ಲಿ  ಭಾನುವಾರ ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ ಬಹುಗುಣ ಅವರ ಬದುಕು ಹೋರಾಟ, ಚಿಂತನೆ ಕುರಿತ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಅವರ ಅನುವಾದಿತ ಕೃತಿ ' ಅಪ್ಪಿಕೋ' ಬಿಡುಗಡೆ ಮಾಡಲಾಯಿತು.  ಅರಿವು ಸಂಸ್ಥೆಯ ಜನಾರ್ದನ್, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ಲೇಖಕ ಜಗದೀಶ್ ಕೊಪ್ಪ ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ, ಅನುವಾದಕಿ ಅರ್ಚನಾ ಖ್ಯಾಡಿ ಇದ್ದಾರೆ.
ಮೈಸೂರಿನಲ್ಲಿ ಭಾನುವಾರ ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ ಬಹುಗುಣ ಅವರ ಬದುಕು ಹೋರಾಟ, ಚಿಂತನೆ ಕುರಿತ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಅವರ ಅನುವಾದಿತ ಕೃತಿ ' ಅಪ್ಪಿಕೋ' ಬಿಡುಗಡೆ ಮಾಡಲಾಯಿತು. ಅರಿವು ಸಂಸ್ಥೆಯ ಜನಾರ್ದನ್, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ಲೇಖಕ ಜಗದೀಶ್ ಕೊಪ್ಪ ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ, ಅನುವಾದಕಿ ಅರ್ಚನಾ ಖ್ಯಾಡಿ ಇದ್ದಾರೆ.   

ಮೈಸೂರು:'ಮನುಕುಲದ ಒಳಿತನ್ನೇ ಬಯಸುವ ಉದಾತ್ತ ಚಿಂತನೆ ಮತ್ತು ಹೋರಾಟಗಳಿಗೆ ಎಂದಿಗೂ ಸಾವಿಲ್ಲ' ಎಂದು
ಲೇಖಕ ಜಗದೀಶ ಕೊಪ್ಪ ಹೇಳಿದರು.

ನಗರದಲ್ಲಿ ಭಾನುವಾರ, ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ, ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ ಬಹುಗುಣ ಅವರ ಬದುಕು ಹೋರಾಟ, ಚಿಂತನೆ ಕುರಿತ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಅವರ ಅನುವಾದಿತ ಕೃತಿ 'ಅಪ್ಪಿಕೋ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಚಿಪ್ಕೋ ಚಳವಳಿಗೂ ಮುನ್ನೂರು ವರ್ಷದ ಹಿಂದೆ ಉತ್ತರಾಖಂಡಲ್ಲಿ ನಡೆದಿದ್ದ ಪರಿಸರ ಸಂರಕ್ಷಣೆಯ ಪ್ರಯತ್ನವೇ ಮತ್ತೆ ಆ ನೆಲದಲ್ಲಿ ಹೋರಾಟದ ಬೀಜವನ್ನು‌ ಬಿತ್ತಿತು' ಎಂದರು.

ADVERTISEMENT

'ಗಾಂಧೀಜಿಯವರಲ್ಲಿ, ಬಹುಗುಣ ಅವರಲ್ಲಿ ಮಾನವಕುಲದ ಒಳಿತಿನ ಅರಿವು ಸಮಗ್ರತೆಯಿಂದ ಕೂಡಿತ್ತು. ಪ್ರಾಮಾಣಿಕ ಮತ್ತು ಪಾರದರ್ಶಕ ಬದುಕು ಅವರ ಹೋರಾಟಗಳಿಗೆ ಗಟ್ಟಿತನವನ್ನು ತಂದುಕೊಟ್ಟಿತ್ತು' ಎಂದರು.

'ಚಿಪ್ಕೋ ಚಳವಳಿಯು ದೇಶದಲ್ಲಿ ಪರಿಸರ ಪ್ರಜ್ಞೆಯನ್ನು ಒಂದು ಶಿಸ್ತಾಗಿ ರೂಪಿಸಲು ನೆರವಾಯಿತು' ಎಂದರು.

'ಬಹುಗುಣರು ಗಾಂಧೀಜಿಯವರನ್ನು ತಮ್ಮ ಗುರುವೆಂದು ಕರೆದುಕೊಂಡಿದ್ದರು. ಅವರ ಉದಾತ್ತ ಚಿಂತನೆಗಳನ್ನು ಬದುಕಿನಲ್ಲಿ ಅನುಸರಿಸಿದ್ದರು' ಎಂದು ಹೇಳಿದರು.

'ಹಿಮಾಲಯದ ಕಾಡುಗಳ ಸಂರಕ್ಷಣೆಗಾಗಿ ಹೋರಾಟ ನಡೆಸಿದ‌ ಅವರು, ತೆಹ್ರಿ ಅಣೆಕಟ್ಟು ವಿರೋಧಿ ಆಂದೋಲನವನ್ನು ಮುನ್ನಡೆಸಿದ್ದರು. ಇನ್ನಷ್ಟು ವರ್ಷಗಳು ಕಳೆದರೆ ಹಿಮಾಲದ ಕುರಿತು ಜನರ ಮನದಲ್ಲಿರುವ ಮಹತ್ ಕಲ್ಪನೆಯೂ ಕರಗಿಬಿಡುವ ಸಾಧ್ಯತೆ ಇದೆ. ಅಭಿವೃದ್ಧಿಯು ಅಷ್ಟೊಂದು ವೇಗದಲ್ಲಿ ಚಲಿಸುತ್ತಿದೆ' ಎಂದರು.

'ಅಭಿವೃದ್ಧಿಯ ಮುಖ್ಯ ಗುರಿ ಏನಾಗಿರಬೇಕು ಎಂಬುದನ್ನು ಅರಿಯಲು ಬಹುಗುಣರ ಬದುಕನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು' ಎಂದರು.

ಉದಾರಿ ಜೇಮ್ಸ್:'ಭಾರತದಲ್ಲಿ ಬಹುಕಾಲ ಉಳಿದು, ಬಹುಗುಣರೊಂದಿಗೆ ಹಲವು ವರ್ಷ ಕಳೆದ ಕೃತಿಯ ಲೇಖಕ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಅತ್ಯಂತ ಉದಾರಿಯಾಗಿದ್ದರು' ಎಂದು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಹೇಳಿದರು.

'ಕೃತಿಯ ಅನುವಾದದ ಹಕ್ಕಿಗಾಗಿ ನೀಡುವ ಸಂಭಾವನೆಯ ಮೊತ್ತವನ್ನು ಉಲ್ಲೇಖಿಸಿದಾಗ, ಅದನ್ನು ನಾನು ನೀಡಲೇ ಎಂದಿದ್ದರು' ಎಂದು ಸ್ಮರಿಸಿದರು.

ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಮಾತನಾಡಿ, 'ಕೃತಿಯನ್ನು ಹಿಂದಿ ಭಾಷೆಗೆ ಬಹುಗುಣರ ಸೊಸೆ ಅರ್ಚನಾ ಬಹುಗುಣರೇ ಅನುವಾದಿಸಿದ್ದಾರೆ' ಎಂದರು.

ಕೃತಿಯ ಅನುವಾದಕಿ ಅರ್ಚನಾ ಖ್ಯಾಡಿ ಮಾತನಾಡಿದರು. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್, ನಗರದ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಅಮೆಚ್ಯೂರ್ ನ್ಯಾಚುರಲಿಸ್ಟ್ಸ್, ಪರಿಸರ ಬಳಗ, ಪ್ರಕೃತಿ ಆಹಾರ ಮತ್ತು ಶಾಗಲೆ ಶಿವರುದ್ರಮ್ಮ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.