ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿದ್ದ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು (ಸಂಗ್ರಹ ಚಿತ್ರ)
ಮೈಸೂರು: ಈ ವರ್ಷ (2024) ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ರಾಜಕೀಯ ಚಟುವಟಿಕೆಗಳು, ಪಲ್ಲಟಗಳು, ಸಮಾವೇಶಗಳು ಹಾಗೂ ನಾಯಕರ ಮಾತಿನ ಜಟಾಪಟಿಗಳಿಗೆ ಜಿಲ್ಲೆಯು ಸಾಕ್ಷಿಯಾಯಿತು. ಕೆಲವು ಪ್ರಮುಖ ರಾಜಕಾರಣಿಗಳು ಅಗಲಿದರು. ಕೆಲವರು ರಾಜಕೀಯವಾಗಿ ‘ಸ್ಥಾನಮಾನ’ ಗಳಿಸಿದರು.
ಲೋಕಸಭಾ ಚುನಾವಣೆ ಏ.26ರಂದು ನಡೆದಿತ್ತು. ಮೈಸೂರು ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ಮೈಸೂರು–ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಚುನಾವಣೆ ತೀವ್ರ ಪೈಪೋಟಿ ಕಂಡಿತು. ಜೂನ್ 4ರಂದು ಫಲಿತಾಂಶ ಪ್ರಕಟವಾಯಿತು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೊಸ ಮುಖ ಹಾಗೂ ರಾಜವಂಶಸ್ಥ ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮತದಾರರು (7,95,503 ಮತ) ‘ಮಣೆ’ ಹಾಕಿದರು. 4 ದಶಕಗಳ ನಂತರ ಬಿಜೆಪಿ ‘ಹ್ಯಾಟ್ರಿಕ್’ ಗೆಲುವು ಸಾಧಿಸಿತು. ಕಾಂಗ್ರೆಸ್‌ನ ಎಂ.ಲಕ್ಷ್ಮಣ ಸೋಲುಭವಿಸಿದರೂ ಗಮನಾರ್ಹ ‘ಮತ ಗಳಿಕೆ’ (6,56,241) ಕಂಡರು. ಕ್ಷೇತ್ರದಲ್ಲಿ ಸತತ 2 ಬಾರಿ ಗೆದ್ದಿದ್ದ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಚಾಮರಾಜನಗರದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹಾಗೂ ಮಂಡ್ಯ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಪ್ರವೇಶಿಸಿದರು.
ಪರಿಷತ್ ಚುನಾವಣೆ: ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂನ್ 3ರಂದು ಹಾಗೂ ಮತ ಎಣಿಕೆ ಜೂನ್ 6ರಂದು (ನೈರುತ್ಯ ಶಿಕ್ಷಕರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳದ್ದೂ) ನಡೆಯಿತು. ಜೆಡಿಎಸ್–ಬಿಜೆಪಿ ಅಭ್ಯರ್ಥಿ ಕೆ.ವಿವೇಕಾನಂದ ಭರ್ಜರಿ ಜಯ ಗಳಿಸಿದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ 5ನೇ ಸಲ ಆಯ್ಕೆ ಬಯಸಿದ್ದ ಮರಿತಿಬ್ಬೇಗೌಡ ಸೋಲನುಭವಿಸಿದರು. ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಪ್ರಥಮ ಪ್ರಾಶಸ್ತ್ಯದ ಮತ’ಗಳಿಂದಲೇ ಗೆಲುವು ಗಳಿಸಿದ ದಾಖಲೆಯನ್ನೂ ವಿವೇಕಾನಂದ ಬರೆದರು.
ಈ ಚುನಾವಣೆಯ ಟಿಕೆಟ್ ಹಂಚಿಕೆ ವಿಷಯದಲ್ಲಿ ಆಸಕ್ತಿಕರ ಬೆಳವಣಿಗೆಗಳು ನಡೆದವು. ಮೊದಲಿಗೆ ‘ಮೈತ್ರಿ’ ಅಭ್ಯರ್ಥಿಯನ್ನಾಗಿ ಬಿಜೆಪಿಯಿಂದ ಈ.ಸಿ.ನಿಂಗರಾಜ್‌ಗೌಡ ಅವರಿಗೆ ಟಿಕೆಟ್ ಪ್ರಕಟಿಸಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದಾಗಿ ಟಿಕೆಟ್ ವಿವೇಕಾನಂದ ಪಾಲಾಯಿತು. ಆಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಜೆಡಿಎಸ್ ಮಣೆ ಹಾಕಲಿಲ್ಲ.
Cut-off box - ಈ ವರ್ಷವೂ ನಡೆಯಲಿಲ್ಲ ಚುನಾವಣೆ! ಮೈಸೂರು ಮಹಾನಗರಪಾಲಿಕೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಈ ವರ್ಷವೂ ನಡೆಯಲಿಲ್ಲ. ಈ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ‘ದರ್ಬಾರ್’ ನಡೆಯುತ್ತಿದ್ದು ಜನಪ್ರತಿನಿಧಿಗಳನ್ನು ಕಂಡುಕೊಳ್ಳುವುದು ಸಾಧ್ಯವಾಗಲಿಲ್ಲ. ಜಿಲ್ಲಾ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಅಧಿಕಾರದ ಅವಧಿ 2021ರಲ್ಲೇ ಮುಕ್ತಾಯವಾಗಿದೆ. 65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಮಹಾನಗರಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರದ ಅವಧಿ 2023ರ ನ.16ರಂದೇ ಕೊನೆಗೊಂಡಿದೆ.
Cut-off box - ಕಾಂಗ್ರೆಸ್ ‘ಜನಾಂದೋಲನ’ ಮೈತ್ರಿ ಪಕ್ಷಗಳ ‘ಮೈಸೂರು ಚಲೋ’ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸದ್ದು ಮಾಡಿದ ಪ್ರಕರಣವೆಂದರೆ ‘ಮುಡಾ ನಿವೇಶನ ಅಕ್ರಮ ಹಂಚಿಕೆ ಆರೋಪದ ಪ್ರಕರಣ’. ಇದು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಲೋಕಾಯುಕ್ತದ ಮೆಟ್ಟಿಲನ್ನೂ ಏರಿದ್ದು ತನಿಖೆ ನಡೆಯುತ್ತಿದೆ. ‘ಮುಡಾದಿಂದ ಬಡಾವಣೆಗಳ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳನ್ನು ಕಳೆದುಕೊಂಡವರಿಗೆ ಅಥವಾ ಮಾಲೀಕರಿಗೆ 50:50 ಅನುಪಾತದಡಿ ಪರಿಹಾರವಾಗಿ ‘ಬದಲಿ ನಿವೇಶನ’ಗಳನ್ನು ನೀಡವಲ್ಲಿ ಅಕ್ರಮ ಎಸಗಲಾಗಿದೆ’ ಎಂಬುದು ಆರೋಪದ ತಿರುಳು. ನಾಲ್ಕು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ನಡೆದಿದೆ ಎಂದು ಆರೋಪದ ಕಾರಣ ದೇಶದಾದ್ಯಂತ ಚರ್ಚಿತವಾಯಿತು. ಈ ವಿಷಯ ಮುಂದಿಟ್ಟುಕೊಂಡು ಬಿಜೆಪಿ–ಜೆಡಿಎಸ್‌ನವರು ‘ಮೈಸೂರು ಚಲೋ’ ಪಾದಯಾತ್ರೆ ನಡೆಸಿದರು. ಆ.10ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಶಕ್ತಿ ಪ್ರದರ್ಶಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು. ಒಂದು ದಿನ ಮುಂಚಿತವಾಗಿ ಆ.9ರಂದು ಕಾಂಗ್ರೆಸ್‌ನವರೂ ‘ಮೈತ್ರಿ ಪಕ್ಷ’ಗಳ ವಿರುದ್ಧ ತೊಡೆತಟ್ಟಿದರು. ‘ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ಅಧಿಕಾರ ದುರುಪಯೋಗ ಮತ್ತು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ದುರುದ್ದೇಶದ ಪಾದಯಾತ್ರೆಯ ವಿರುದ್ಧ ಕಾಂಗ್ರೆಸ್ ಜನಾಂದೋಲನ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಇಡೀ ಪಕ್ಷವೇ ನಿಂತಿದೆ’ ಎಂಬ ಸಂದೇಶ ರವಾನಿಸಲಾಯಿತು. ಎರಡೂ ಸಮಾವೇಶಗಳು ದಿನದ ಅಂತರದಲ್ಲೇ ಮಹಾರಾಜ ಕಾಲೇಜು ಮೈದಾನದಲ್ಲೇ ನಡೆದದ್ದು ವಿಶೇಷ. ಪಾರ್ವತಿ ಅವರು ಮುಡಾ ನೀಡಿದ್ದ ಪರಿಹಾರದ 14 ನಿವೇಶನಗಳನ್ನು ಹಿಂತಿರುಗಿಸಿ ಸೆ.30ರಂದು ಪತ್ರ ಬರೆದರು. ಬಳಿಕ ಮುಡಾ ನಿವೇಶನ ವಾಪಸ್ ಪಡೆದಿದೆ. ಸಿಎಂ ಹಾಗೂ ಅವರ ಪತ್ನಿ ಸೇರಿದಂತೆ ಹಲವರು ಮೈಸೂರಿನಲ್ಲಿ ಲೋಕಾಯುಕ್ತ ವಿಚಾರಣೆ ಎದುರಿಸಿದರು.
Cut-off box - ಶ್ರೀನಿವಾಸ ಪ್ರಸಾದ್ ಅಸ್ತಂಗತ ಈ ಭಾಗದ ಪ್ರಮುಖ ದಲಿತ ನಾಯಕ ಕೇಂದ್ರದ ಮಾಜಿ ಸಚಿವ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಏ.29ರಂದು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಏ.30ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಸಚಿವ ಮಹದೇವಪ್ಪ ಖುದ್ದು ನೇತೃತ್ವ ವಹಿಸಿದ್ದರು. ರಾಜಕೀಯ ನಾಯಕರು ಪಕ್ಷ ಮರೆತು ಪಾಲ್ಗೊಂಡು ನಮನ ಸಲ್ಲಿಸಿದರು. ಮೇ 11ರಂದು ಅಶೋಕಪುರಂನಲ್ಲಿ ನಡೆದಿದ್ದ ‘ಸ್ವಾಭಿಮಾನಿಗೆ ಸಾವಿರದ ನುಡಿನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ–ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವೇದಿಕೆ ಹಂಚಿಕೊಂಡಿದ್ದರು.
Cut-off box - ‘ಹಿಂದಣ ಹೆಜ್ಜೆ’ಯ ಪ್ರಮುಖ ಘಟನೆಗಳು * ಜ.26: ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ಆರ್) ಅಧ್ಯಕ್ಷರಾಗಿ ನೇಮಕ. * ಜ.31: ಮುಡಾ ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು ನಿಧನ. * ಫೆ.22: ಸಂಸದ ವಿ.ಶ್ರೀನಿವಾಸ ಪ್ರಸಾದ್ ಭೇಟಿಯಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ. ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ. * ಫೆ.29: ಮಾಜಿ ಮೇಯರ್ ಅಯೂಬ್ ಖಾನ್ ಸರ್ಕಾರ ತಮಗೆ ನೀಡಿದ್ದ ಅಧ್ಯಕ್ಷ ಸ್ಥಾನವನ್ನು ಕೆಲವೇ ಗಂಟೆಗಳಲ್ಲಿ ಬದಲಾಯಿಸಿಕೊಂಡರು. ಮೈಲ್ಯಾಕ್ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಿಸಲಾಗಿತ್ತು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಗಾದಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. * ಫೆ.29: ಮುಡಾ ಅಧ್ಯಕ್ಷರಾಗಿ ಕೆ.ಮರೀಗೌಡ ನೇಮಕ. * ಮಾರ್ಚ್ 9: ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ವಾಸು (72) ಅನಾರೋಗ್ಯದಿಂದ ನಿಧನ. * ಮಾರ್ಚ್ 13: ರಾಜವಂಶಸ್ಥ ಯದುವೀರ್‌ಗೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ. * ಮಾರ್ಚ್ 16: ಶ್ರೀನಿವಾಸ ಪ್ರಸಾದ್ ಭೇಟಿಯಾದ ಯದುವೀರ್ ಚುನಾವಣೆಯಲ್ಲಿ ಬೆಂಬಲಿಸಲು ಮನವಿ. * ಮಾರ್ಚ್ 17: ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಂದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನೂರಾರು ಅಭಿಮಾನಿಗಳು ಕಾರ್ಯಕರ್ತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದರು. ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ದ ಶೀರ್ಷಿಕೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊದಲಾದ ನಾಯಕರು ಭಾಗಿ. ಅಭಿನಂದನಾ ಗ್ರಂಥ ಬಿಡುಗಡೆ. * ಮಾರ್ಚ್ 21: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ ಅವರಿಗೆ ಟಿಕೆಟ್. * ಮಾರ್ಚ್ 24: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ನೇಮಕ. * ಮಾರ್ಚ್ 27: ಮೈಸೂರಿನ ಮಾಜಿ ಮೇಯರ್‌ಗಳಾದ ಬಿ.ಎಲ್. ಭೈರಪ್ಪ ಕೆ.ವಿ. ಮಲ್ಲೇಶ್ ಹಾಗೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ. * ಮಾರ್ಚ್ 28: ಶ್ರೀನಿವಾಸ ಪ್ರಸಾದ್ ಭೇಟಿಯಾಗಿ ಬೆಂಬಲ ಕೋರಿದ ಕಾಂಗ್ರೆಸ್ ನಾಯಕರು. ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಚಾಮರಾಜನಗರದ ಅಭ್ಯರ್ಥಿ ಸುನೀಲ್ ಬೋಸ್ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಭಾಗಿ. * ಏ.7: ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ವಾದಿ) ಪಕ್ಷ ಜಿಲ್ಲಾ ಸಮಿತಿಯಿಂದ ಮೈಸೂರು ಕೋಆಪರೇಟಿವ್ ಸೊಸೈಟಿ ಭವನದಲ್ಲಿ ರಾಜಕೀಯ ಸಮಾವೇಶ. * ಏಪ್ರಿಲ್ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮುನಿಸು–ವೈರತ್ಯ ಮರೆತು ಬಿಜೆಪಿಯ ಶ್ರೀನಿವಾಸ ಪ್ರಸಾದ್ ಭೇಟಿ ಆರೋಗ್ಯ ವಿಚಾರಣೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮನವಿ. * ಏಪ್ರಿಲ್ 14: ಮಹಾರಾಜ ಕಾಲೇಜು ಮೈದಾನದಲ್ಲಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರಿವಾಗಿ ಪ್ರಚಾರ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭಾಗಿ. ಅಂದೇ ಬೆಳಿಗ್ಗೆ ಸಮಾವೇಶಕ್ಕೆ ಬರುವಂತೆ ಶ್ರೀನಿವಾಸಪ್ರಸಾದ್ ಅವರನ್ನು ಕೋರಿದ ಬಿ.ಎಸ್.ಯಡಿಯೂರಪ್ಪ. ಅನಾರೋಗ್ಯದ ಕಾರಣ ಬರಲಾಗುವುದಿಲ್ಲ ಎಂದು ತಿಳಿಸಿದ ಪ್ರಸಾದ್. * ಜೂನ್ 6: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಮೈಸೂರಿನ ಡಾ.ಯತೀಂದ್ರ ಸಿದ್ದರಾಮಯ್ಯ ಆಯ್ಕೆ. * ಜುಲೈ 12: ‘ಬಿಜೆಪಿಯವರು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯಪ್ರೇರಿತವಾಗಿ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಮುಡಾ ಬಳಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ. ಅದೇ ದಿನ ಮುಡಾ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿಯವರು ಮುಡಾ ಕಚೇರಿಗೆ ಮುತ್ತಿಗೆಗೆ ಮುಂದಾದಾಗ ಪೊಲೀಸರ ವಶಕ್ಕೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ್ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೂಡ್ಸ್ ವಾಹನದಲ್ಲಿ ಬಂದು ಪಾಲ್ಗೊಂಡಿದ್ದರು. ಎರಡೂ ಪಕ್ಷಗಳವರ ಪ್ರತಿಭಟನೆ ಕಾರಣ ಮುಡಾ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ‘ಅಘೋಷಿತ ನಿಷೇಧಾಜ್ಞೆ’ ಉಂಟಾಗಿ ಸಾರ್ವಜನಿಕರಿಗೆ ತೊಂದರೆ. * ಸೆ.18: ಮಂಜುನಾಥಪುರದ ಎಚ್.ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ನಿಮದ ಸದಸ್ಯತ್ವ ನೋಂದಣಿ ಬೂತ್ ಸಮಿತಿ ಅಭಿಯಾನ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿ. * ಅ.16: ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ.ಮರೀಗೌಡ ರಾಜೀನಾಮೆ. * ಅ.26–27: ಪುರಭವನದಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆ ಎಐಯುಟಿಯುಸಿಯಿಂದ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನ. * ನ.6: ‘ಮುಡಾ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಬಿಜೆಪಿಯಿಂದ ರಾಮಸ್ವಾಮಿ ವೃತ್ತದಲ್ಲಿ ‘ಗೋ ಬ್ಯಾಕ್ ಸಿದ್ದರಾಮಯ್ಯ ಚಳವಳಿ’. ‘ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ– ಜೆಡಿಎಸ್ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿ ದಸಂಸ ಜಿಲ್ಲಾ ಶಾಖೆಯ ಸದಸ್ಯರಿಂದ ಡಿಸಿ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ಸಿದ್ದರಾಮಯ್ಯ ಅವರಿಗೆ ಬೆಂಬಲ. * ನ.25–26: ಮೈಸೂರಿನ ವೈಟ್ ಪ್ಯಾಲೇಸ್ ಕನ್ವೆನ್ಸನ್ ಸೆಂಟರ್‌ನಲ್ಲಿ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ರಾಜ್ಯ ಪ್ರತಿನಿಧಿಗಳ ಸಮಾವೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.