ADVERTISEMENT

ರಿಷಿ ಶಿವಪ್ರಸನ್ನ ಅಗಾಧ ಪ್ರತಿಭೆಗೆ ಮಾರು ಹೋದ ಮೈಸೂರಿನ ಪ್ರೇಕ್ಷಕರು

ಪಟಾಪಟ್ ಉತ್ತರ ನೀಡಿದ ಬಾಲ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 13:31 IST
Last Updated 29 ಜೂನ್ 2022, 13:31 IST
ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಿ ಶಿವಪ್ರಸನ್ನ – ಪ್ರಜಾವಾಣಿ ಚಿತ್ರ
ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಿ ಶಿವಪ್ರಸನ್ನ – ಪ್ರಜಾವಾಣಿ ಚಿತ್ರ   

ಮೈಸೂರು: ಎಂಟು ವರ್ಷ ವಯಸ್ಸಿನ ಆ ಬಾಲಕ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ರೊಟೇರಿಯನ್‌ಗಳ ಎದುರು ನಿಂತು, ಒಂದೊಂದಾಗಿ ತೂರಿ ಬರುತ್ತಿದ್ದ ಪ್ರಶ್ನೆಗಳಿಗೆ ನಿರ್ಭಿಡೆಯಿಂದ ಉತ್ತರಿಸಿದರು. ಯಾವುದೇ ವಿಷಯದ ಪ್ರಶ್ನೆಯಾದರೂ ವಿಚಲಿತರಾಗದೆ ನಿರರ್ಗಳವಾಗಿ ವಿವರಿಸಿ, ನೆರೆದಿದ್ದವರಿಂದ ಚಪ್ಪಾಳೆಯ ಪ್ರಶಂಸೆಯನ್ನು ಗಿಟ್ಟಿಸಿದರು. ತಮ್ಮ ಬುದ್ಧಿಮತ್ತೆಯ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾದರು.

ಆ ಬಾಲಕನ ಹೆಸರು ರಿಷಿ ಶಿವಪ್ರಸನ್ನ. ಅಗಾಧ ಬುದ್ಧಿಶಕ್ತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ಪ್ರತಿಭೆಯೊಂದಿಗೆ ಸಂವಾದ ಕಾರ್ಯಕ್ರಮವನ್ನು ರೋಟರಿ ಮೈಸೂರು ಉತ್ತರ ವಲಯದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದರು.

ಪಿಜ್ಜಾದಿಂದ ಹಿಡಿದು ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂವರೆಗೆ, ಜೇನು ಹುಳುಗಳಿಂದ ಆರಂಭಿಸಿ ಆಲೂಗಡ್ಡೆ ಚಿಪ್ಸ್‌ವರೆಗೆ, ಲಸಿಕೆ, ಜಾಗತಿಕ ತಾಪಮಾನ ಹೀಗೆ... ಹಲವು ವಿಷಯಗಳ ಪ್ರಶ್ನೆಗಳಿಗೆ ಪಟಾಪಟ್‌ ಉತ್ತರ ನೀಡಿ ಗಮನಸೆಳೆದರು. ಇಷ್ಟೆಲ್ಲ ಬುದ್ಧಿಮತ್ತೆ ಹೇಗೆ ಸಾಧ್ಯವಾಗುತ್ತದೆ ಎಂಬ ಮಾಡರೇಟರ್‌ ಹಫ್ತಾಬ್‌ ಪ್ರಶ್ನೆಗೆ, ‘ಪುಸ್ತಕಗಳನ್ನು ಓದುವುದರಿಂದ ಗಳಿಸಬಹುದು. ಓದುವುದರಿಂದ ಎಲ್ಲ ಪ್ರಶ್ನೆಗಳಿಗೂ ಸುಲಭವಾಗಿ ಉತ್ತರಿಸಬಹುದು. ಹೀಗಾಗಿ, ಯಾವ ಪ್ರಶ್ನೆ ಎದುರಾಗುತ್ತದೆ ಎಂಬ ಆತಂಕ ಇರುವುದಿಲ್ಲ’ ಎಂದು ರಿಷಿ ಉತ್ತರಿಸಿದಾಗ ಸಭಾಂಗಣ ಚಪ್ಪಾಳೆಗಳ ಮಳೆಯಿಂದ ತುಂಬಿ ಹೋಯಿತು.

ADVERTISEMENT

ಓದುವುದರಿಂದ ಸಾಧ್ಯ:

‘ಎರಡು ಗಂಟೆಗಳಿಂದ ಯಾವುದೇ ಪುಸ್ತಕ ಓದಲಿಲ್ಲವಾದರೆ ಮುಂದಿನ‌ ನಾಲ್ಕು ಗಂಟೆ ನಾವು ಅನಕ್ಷರಸ್ಥರು ಎಂದೇ ಅರ್ಥ’ ಎಂದು ಹೇಳುವ ಮೂಲಕ ಓದಿನ ಮಹತ್ವವನ್ನು ರಿಷಿ ಕಟ್ಟಿಕೊಟ್ಟರು. ಒಂದು ತಾಸಿಗೂ ಹೆಚ್ಚು ಸಮಯ ಸಂವಾದದಲ್ಲಿ ಪಾಲ್ಗೊಂಡರು. ತಾನು ಅಭಿವೃದ್ಧಿಪಡಿಸಿರುವ ಆ್ಯಂಡ್ರಾಯ್ಡ್‌ ಆ್ಯಪ್‌ಗಳ ವಿವರ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ವಿಶ್ವವಿದ್ಯಾಲಯದ ಕುಲ‍ಪತಿ ಪ್ರೊ.ಜಿ. ಹೇಮಂತ್‌ಕುಮಾರ್, ‘ನಾನು ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿ. ಮೊದಲು ಕಂಪ್ಯೂಟರ್ ನೋಡಿದ್ದೇ ಎಂ.ಎಸ್ಸಿ. ಮಾಡುವಾಗ. ಆದರೆ, ರಿಷಿ ಚಿಕ್ಕ ವಯಸ್ಸಿನಲ್ಲೇ ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸಿರುವುದು ದೊಡ್ಡ ಸಂಗತಿ. ವಿಶ್ವವಿದ್ಯಾಲಯದಲ್ಲೂ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಶೀಘ್ರವೇ ಆಯೋಜಿಸಲಾಗುವುದು. ಯಾವುದೇ ವಿಭಾಗದಲ್ಲಿ ಬೇಕಾದರೂ ಸಂದರ್ಶಕ ಪ್ರಾಧ್ಯಾಪಕರಾಗಿ ಪಾಲ್ಗೊಳ್ಳಲು ಅವಕಾಶ ಕೊಡಲಾಗುವುದು’ ಎಂದರು.

ಪ್ರತಿಭೆ ವಿಕಾಸಕ್ಕೆ ಅನುವು ಮಾಡಿಕೊಡಿ:

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ರಿಷಿಗೆ ದೇವರೇ ಆಶೀರ್ವಾದ ಮಾಡಿದ್ದಾನೆ. ಹೀಗಾಗಿ, ಅಸಾಧಾರಣೆ ಪ್ರತಿಭೆ ಈ ಬಾಲಕನಲ್ಲಿದೆ. ಕನ್ನಡಿಗರು ಹೆಮ್ಮೆ ಪಡುವ ಪ್ರತಿಭೆ ಈತ. ವಿಶೇಷ ಬುದ್ಧಿಮತ್ತೆಯಿಂದ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾನೆ’ ಎಂದು ಶ್ಲಾಘಿಸಿದರು.

‘ಪ್ರತಿ‌‌ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಪೋಷಕರು ಅದನ್ನು ಗುರುತಿಸಿ ವಿಕಾಸಕ್ಕೆ ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ರೋಟರಿ ಜಿಲ್ಲೆ 3181’ರ ಜಿಲ್ಲಾ ಗವರ್ನರ್ ಎ.ಎರ್. ರವೀಂದ್ರ ಭಟ್ ಉದ್ಘಾಟಿಸಿದರು. ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಲ್. ಚನ್ನಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಶಾಂತ್ ಸಿ. ಪಾಲ್ಗೊಂಡಿದ್ದರು.

ನಿರ್ದೇಶಕ ರಾಮಾರಾಧ್ಯ ಸ್ವಾಗತಿಸಿದರು. ಶಾರದಾ ಶಿವಲಿಂಗಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ರೋಟೇರಿಯನ್‌ ರಾಜಶೇಖರ ಕದಂಬ ಸನ್ಮಾನಪತ್ರ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.