ಮೈಸೂರು: ಯುವ ಮನಸ್ಸುಗಳಿಗೆ ಮುದ ನೀಡುವ ಯುವ ದಸರಾದ ಪ್ರಥಮ ದಿನ ಕನ್ನಡದ ಹಾಡುಗಳು ಮೇಳೈಸಿದವು. ಅರ್ಜುನ್ ಜನ್ಯ ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ಕನ್ನಡದ ಟಾಪ್ ಹಾಡುಗಾರರ ತಂಡದ ಸವಿಗಾನ ಕಿವಿ ಇಂಪಾಗಿಸಿತು.
ಕಣ್ಣು ಕುಕ್ಕುವ ಬೆಳಕಿನ ವಿನ್ಯಾಸದ ನಡುವೆ ವೇದಿಕೆಗೆ ಆಗಮಿಸಿದ ‘ಕನ್ನಡದ ಮ್ಯೂಸಿಕ್ ಸ್ಟಾರ್’ ಅರ್ಜುನ್ ಜನ್ಯ ನಿರಂತರ 2 ಗಂಟೆಗೂ ಅಧಿಕ ಕಾಲ ಪ್ರೇಕ್ಷಕರನ್ನು ರಂಜಿಸಿದರು. ‘ನಮಸ್ಕಾರ ಮೈಸೂರು' ಎನ್ನುತ್ತಾ ವೇದಿಕೆಗೆ ಆಗಮಿಸಿದ ಅವರನ್ನು ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳು ಸ್ವಾಗತಿಸಿದವು.
ಮ್ಯೂಸಿಕಲ್ ರ್‍ಯಾಂಪ್ ವಾಕ್ ಮೂಲಕ ಗಾಯಕರಾದ ವ್ಯಾಸರಾಜ್, ಪೃಥ್ವಿ ಭಟ್, ಸುನಿಲ್, ಐಶ್ವರ್ಯ ರಂಗರಾಜನ್, ಹೇಮಂತ್, ಜಸ್ಕರನ್ ಸಿಂಗ್, ನಿಶಾನ್ ರೈ, ಸುಮುಖ್, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್ ಹಿಟ್ ಹಾಡುಗಳೊಂದಿಗೆ ವೇದಿಕೆ ಆಗಮಿಸಿದರು. ನಿರೂಪಕಿ ಅನುಪಮಾ ಭಟ್ ಹಾಡುಗಳ ವಿವರ ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.
‘ಅರಳದ ಕಿರು ಮಲ್ಲಿಗೆ, ಆಯಿತೆ ಮೈ ಮಲ್ಲಿಗೆ’, ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ, ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ’, ‘ಜಗವೇ ನೀನು ನನ್ನ ಗೆಳತಿಯೇ.. ನನ್ನ ಜೀವದ ಒಡತಿಯೇ’ ಪ್ರೇಮಗೀತೆಗೆ ಪ್ರೇಕ್ಷಕರೂ ಧ್ವನಿಯಾದರು. ‘ಶ್ರೀ ಆಂಜನೇಯಂ ಪ್ರಸನ್ನಾಂಜೇಯಂ’ ಹಾಡಿಗೆ ಹೆಜ್ಜೆ ಹಾಕಿ ಕುಣಿದರು. ಟಪ್ಪಾಂಗುಚಿ ಹಾಡುಗಳಿಗೆ ಹುಕ್ ಸ್ಟೆಪ್ ಹಾಕಿ ನಲಿದರು.
ಲಗೋರಿ ಬ್ಯಾಂಡ್ ತಂಡದ ವೆಸ್ಟರ್ನ್ ಶೈಲಿಯ ಹಾಡುಗಳಿಗೆ ಯುವ ಸಮೂಹ ಸಖತ್ ಸ್ಟೆಪ್ ಹಾಕಿದರು.
‘ಸೋಜುಗಾದ ಸೂಜಿ ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ’, ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ‘ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ.. ದಿನವೂ ನೀ ಬರುವ ಆ ದಾರಿಯ ಕಾಯುವೆ’, ‘ಕಿರಿಕ್ ಪಾರ್ಟಿ’ ಚಿತ್ರದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’ ಹಾಡುಗಳಿಗೆ ಜಾನ್ವಿ ಭಟ್ ಧ್ವನಿಯಾದರು.
ಅರ್ಜುನ್ ಜನ್ಯ ತಂಡದ ಕಾರ್ಯಕ್ರಮಕ್ಕೆ ಮೊದಲು ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಅನನ್ಯ ಪ್ರಕಾಶ್, ಅನೀಶ್ ಕನ್ನಡ ಚಲನ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. ‘ಟ್ವಿಂಕಲ್, ಟ್ವಿಂಕಲ್ ಲಿಟಲ್ ಸ್ಟಾರ್’, ‘ಕೂರಕ್ಕೂ ಕಲ್ಲಿಕೆರೆ ವಾವಾ’, ‘ಬ್ಯಾಂಗಲ್ ಬಂಗಾರಿ’ ಹಾಡುಗಳು ಪ್ರೇಕ್ಷಕರ ಮನಸ್ಸು ಗೆದ್ದಿತು. ಕಳೆದ ಬಾರಿಗಿಂತ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸಿತ್ತು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪವಾಗಿರದೆ ಅನೇಕರು ಪರದಾಡಿದರು.
‘ದಸರಾ ಒಗ್ಗೂಡಿಸುವ ಹಬ್ಬ’
ಉತ್ತನಹಳ್ಳಿ ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ದಸರಾ ಎಂದರೆ ಜನರನ್ನು ಒಗ್ಗೂಡಿಸುವ ಸೌಹಾರ್ದತೆ ಜನ ಜೀವನದ ಮಜಲುಗಳನ್ನು ಸಾಂಸ್ಕೃತಿಕ ವಿಚಾರ ಅಭಿವ್ಯಕ್ತಿಗೊಳಿಸುವ ಆಚರಣೆ. ಮುಂದಿನ ಯುವಜನತೆ ಸಾಂಸ್ಕೃತಿಕ ನಾಯಕತ್ವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ ಕೆ. ಹರೀಶ್ ಗೌಡ ಡಿ.ರವಿಶಂಕರ್ ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಸಿ.ಎನ್.ಮಂಜೇಗೌಡ ಗ್ಯಾರಂಟಿ ಪ್ರಾಧಿಕಾರದ ಉಪಾದ್ಯಕ್ಷೆ ಪುಷ್ಪಾ ಅಮರನಾಥ್ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಐಜಿಪಿ ಬೋರೆಲಿಂಗಯ್ಯ ಎಸ್ಪಿ ಎನ್.ವಿಷ್ಣುವರ್ಧನ್ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್.ಕೆ. ಆರ್ ಭಾಗವಹಿಸಿದ್ದರು.
ಹಾಡು ಹಾಡಿದ ಜಿಟಿಡಿ ‘ಮೈಸೂರು ದಸರಾ ಎಷ್ಟೊಂದು ಸುಂದರ...
ಚೆಲ್ಲಿದೆ ನಗೆಯ ಪನ್ನೀರಾ’.. ಹಾಡಿಗೆ ಶಾಸಕ ಜಿ.ಟಿ.ದೇವೇಗೌಡ ಧ್ವನಿಯಾದಾಗ ಪ್ರೇಕ್ಷಕ ಸಮೂಹ ಶಿಳ್ಳೆ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತು ಮುಂದುವರಿಸಿದ ಶಾಸಕರು 'ಶಾಂತಿಯುತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾವುದೇ ತೊಂದರೆಗಳಾಗದಂತೆ ಎಚ್ಚರವಹಿಸಿ’ ಎಂದು ಯುವಜನರಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.