
ಹುಣಸೂರು: ನಾಯಕ ಸಮುದಾಯದ ಯುವಕರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಆಸ್ತಿಯಾಗುವ ಪ್ರಯತ್ನ ಮಾಡಬೇಕು ಎಂದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಯಕ ಸಮುದಾಯದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆ ಹೆಚ್ಚಿದ್ದು, ಯುವಕರು ಈ ದಿಕ್ಕಿನಲ್ಲಿ ಗಂಭೀರವಾಗಿ ಚಿಂತಿಸಿ ಉನ್ನತ ಹಂತಕ್ಕೆ ಬೆಳೆದು ಆರ್ಥಿಕ ಸಮಸ್ಯೆಯನ್ನು ನೀಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಶಿಕ್ಷಣವನ್ನು ಯಾರೊಬ್ಬರಿಂದಲೂ ಕಳವು ಮಾಡಲು ಸಾಧ್ಯವಿಲ್ಲ, ಹೀಗಾಗಿ ಜ್ಞಾನ ಸಂಪಾದಿಸಿ ಆಸ್ತಿಯನ್ನಾಗಿಸಿಕೊಳ್ಳಿ’ ಎಂದರು.
‘ಜಯಂತ್ಯುತ್ಸವಗಳು ಮಹನೀಯರ ಸ್ಮರಣೆಗೆ ಸೀಮಿತಗೊಳ್ಳದೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಕೆಲಸಕ್ಕೆ ಪ್ರೇರಣೆ ಸಿಗುವಂತಾಗಬೇಕು ಎಂಬ ದೃಷ್ಟಿಯಲ್ಲಿ ಆಚರಿಸುತ್ತೇವೆ. ವಾಲ್ಮೀಕಿ, ಬುದ್ಧ, ಬಸವಣ್ಣ ಅವರನ್ನು ಆದರ್ಶರನ್ನಾಗಿಸಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾತನಾಡಿ, ‘ವಾಲ್ಮೀಕಿ ಸಮುದಾಯದವರು ಅಕ್ಷರ ಸಂಸ್ಕೃತಿ ಬೆಳೆಸಿಕೊಂಡು ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು. ರಾಮಾಯಣ ಮತ್ತು ಮಹಾಭಾರತ ಸೃಷ್ಟಿಕರ್ತರಾದ ಮಹರ್ಷಿ ವಾಲ್ಮೀಕಿ ಮತ್ತು ವ್ಯಾಸರು ನಾಣ್ಯದ ಎರಡು ಮುಖಗಳಿದ್ದಂತೆ. ಈ ಗ್ರಂಥವನ್ನು ಪ್ರತಿ ನಿತ್ಯ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದರು.
‘ಸಮಸಮಾಜ ಪರಿಕಲ್ಪನೆಯಲ್ಲಿ ರಚಿತವಾದ ಗ್ರಂಥದಲ್ಲಿನ ವಿಚಾರವನ್ನು ಮೈಗೂಡಿಸಿಕೊಂಡು ನಾಯಕ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಅಧಿಕಾರದ ಗದ್ದುಗೆ ಹಿಡಿಯುವ ದಿಕ್ಕಿನಲ್ಲಿ ಓಡುವ ಬದಲಿಗೆ ಅಧಿಕಾರದ ಗದ್ದುಗೆ ತನ್ನತ್ತ ಬರುವಂತೆ ಸೃಷ್ಟಿಸುವ ಸಂಸ್ಕೃತಿ ಮತ್ತು ಸಂಸ್ಕಾರ ನಿಮ್ಮದಾಗಬೇಕಿದೆ’ ಎಂದರು.
ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ‘ನಾಯಕ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರವಿದ್ದು, ಇದರ ಹಿಂದೆ ಮಾಜಿ ಶಾಸಕ ದಿ.ಚಿಕ್ಕಮಾದು ಮತ್ತು ಉಗ್ರಪ್ಪ ಅವರ ಕೊಡುಗೆ ಹಾಗೂ ಶ್ರಮ ಅಪಾರ’ ಎಂದರು.
‘ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಳಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಿದ್ದು, ಹಂತ ಹಂತವಾಗಿ ಅನುದಾನ ಸಮೇತ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ’ ಎಂದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಅಗ್ನಿಶಾಮಕ ದಳ ಡಿಐಜಿ ರವಿಚನ್ನಣ್ಣನವರ್, ಸಂಸದ ಜಿ.ಕುಮಾರನಾಯಕ್, ಪ್ರಧಾನ ಭಾಷಣಕಾರ ಪ್ರಶಾಂತ್ ನಾಯಕ್, ಪ್ರಸನ್ನಾನಂದಾ ಸ್ವಾಮೀಜಿ, ನಟರಾಜಸ್ವಾಮೀಜಿ ಮಾತನಾಡಿದರು. ಶಾಸಕ ಅನಿಲ್ ಚಿಕ್ಕಮಾದು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಅಣ್ಣಯ್ಯನಾಯಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶೋಭಾ ಮೋಹನ್ ಹಾಗೂ ಸಮುದಾಯದ ಮುಖಂಡರಿದ್ದರು.
ರಾಜ್ಯದಾದ್ಯಂತ ರಸ್ತೆ ಗುಂಡಿ ಬಿದ್ದಿದ್ದು ಡಿಸೆಂಬರ್ ನಂತರದಲ್ಲಿ ಎಲ್ಲಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ಅನುದಾನ ಸಮೇತ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿ ಗುಂಡಿಮುಕ್ತ ರಸ್ತೆಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.