ಮೈಸೂರು: ದಸರೆಗೆ ಮುನ್ನುಡಿ ಬರೆದ ‘ಯುವ ಸಂಭ್ರಮ’ದ ಏಳನೇ ದಿನವಾದ ಶುಕ್ರವಾರ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕನ್ನಡದ ಕಂಪು ಪಸರಿಸಿತು.
ವಿದ್ಯಾರ್ಥಿ– ವಿದ್ಯಾರ್ಥಿನಿಯರು ಕನ್ನಡ ಚಲನಚಿತ್ರ ಗೀತೆಗಳಿಗೆ ಪ್ರಸ್ತುತಪಡಿಸಿದ ನೃತ್ಯವು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಂಗು ರಂಗಿನ ವೇದಿಕೆಯ ಮುಂಭಾಗ ಕನ್ನಡದ ಬಾವುಟಗಳು ರಾರಾಜಿಸಿದವು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಘೋಷಣೆ ಮುಗಿಲು ಮುಟ್ಟಿತು.
ತಲಕಾಡಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಸಂಸ್ಥೆಯ ವಿದ್ಯಾರ್ಥಿಗಳು ವೀರ ಕನ್ನಡಿಗ ಚಿತ್ರದ ‘ಜೀವ ಕನ್ನಡ ದೇಹ ಕನ್ನಡ’, ಮಲ್ಲ ಚಿತ್ರದ ‘ಕರುನಾಡೇ... ಕೈ ಚಾಚಿದೆ ನೋಡೆ’ ಹಾಗೂ ಸಮರ ಚಿತ್ರದ ‘ಕನ್ನಡದ ಮಾತು ಚೆನ್ನ, ಕನ್ನಡದ ನುಡಿ ಚೆನ್ನ’ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು. ಮಂಡ್ಯದ ಕನ್ನಲಿ ಸರ್ಕಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪ್ರೇರಣಾ ವಿಶೇಷ ಚೇತನರ ಟ್ರಸ್ಟ್ ಮಕ್ಕಳು ‘ಕನ್ನಡವೇ ನಮ್ಮಮ್ಮ, ಅವಳಿಗೆ ಕೈಮುಗಿಯಮ್ಮ’ ಎಂಬ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದವರಲ್ಲಿ ಕನ್ನಡಾಭಿಮಾನ ಮೂಡಿಸಿದರು.
ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಗಮಂಗಲದ ಆದಿಚುಂಚನಗಿರಿ ಕಾಲೇಜು, ಜೆಎಸ್‌ಎಸ್ ಕಲಾ, ವಾಣಿಜ್ಯ ಕಾಲೇಜು, ನಂಜನಗೂಡಿನ ದೇವಿರಮ್ಮನಹಳ್ಳಿಯ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು ಕರ್ನಾಟಕದ ಜಾನಪದದ ಸೊಗಡನ್ನು ನೆರೆದವರಿಗೆ ಉಣಬಡಿಸಿದರು. ವಿಶ್ವವಿದ್ಯಾಲಯದ ಸಂಜೆ ಕಾಲೇಜಿನ ವಿದ್ಯಾರ್ಥಿಗಳ ಶಿವತಾಂಡವವು ಸಂಚಲನ ಮೂಡಿಸಿತು. ಪ್ರೇಕ್ಷಕರೂ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸ್ವಾತಂತ್ರ್ಯ ಹೋರಾಟಗಾರರು, ಡಾ.ಬಿ.ಆರ್.ಅಂಬೇಡ್ಕರ್, ಅರ್ಜುನ ಆನೆಯ ಜೀವನದ ಕಥೆಗಳನ್ನು ಸಾರುವ ನೃತ್ಯರೂಪಕಗಳು ಜನಮೆಚ್ಚುಗೆ ಪಡೆಯಿತು. ಕೆ.ಆರ್.ನಗರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ‘ನಶಾ ಮುಕ್ತ ಭಾರತ’ ಶೀರ್ಷಿಕೆಯಲ್ಲಿ ನೀಡಿದ ಪ್ರದರ್ಶನವು ಭಾವನಾತ್ಮಕವಾಗಿತ್ತು. ವಿವಿಧ ಜಿಲ್ಲೆಯ 59 ತಂಡಗಳು ನೆರೆದಿದ್ದವರಿಗೆ ಮನರಂಜನೆ ನೀಡಿದವು.
ಯುವ ಸಂಭ್ರಮದಲ್ಲಿ ಮಹಿಳೆಯರು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದರು ಪ್ರಜಾವಾಣಿ ಚಿತ್ರ:ಅನೂಪ್ ರಾಘ ಟಿ.
ಇಂದು ಕೊನೆಯ ದಿನ
ಎಂಟು ದಿನಗಳಲ್ಲಿ ಸಾವಿರಾರು ಕಲಾವಿದರಿಗೆ ವೇದಿಕೆಯಾದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಬುಧವಾರ (ಸೆ.17) ತೆರೆ ಬೀಳಲಿದೆ. ಒಟ್ಟು ಎಂಟು ದಿನಗಳ ಕಾಲ ನಡೆದ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 428 ತಂಡಗಳು ಪ್ರದರ್ಶನ ನೀಡಿವೆ. ಸಂಜೆ ನಾಲ್ಕರಿಂದ ಆರಂಭವಾಗಿ ರಾತ್ರಿ 10.30ರವರೆಗೂ ಕಾರ್ಯಕ್ರಮ ಮುಂದುವರೆದಿತ್ತು. ಪ್ರತಿನಿತ್ಯ ಕನ್ನಡದ ಸಿನೆಮಾ ಹಾಗೂ ಧಾರವಾಹಿ ನಟ ನಟಿಯರು ಆಗಮಿಸಿ ರಂಜಿಸಿದರು.
ಕಾಂಪೌಂಡ್ ಜಿಗಿದ ಸಾರ್ವಜನಿಕರು
ಯುವ ಸಂಭ್ರಮಕ್ಕೆ ಆಗಮಿಸುವವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಪೊಲೀಸರು ಬಯಲು ರಂಗಮಂದಿರದೊಳಗೆ ಬಿಡುತ್ತಿದ್ದಾರೆ. ಮಂಗಳವಾರವೂ ವಿಶ್ವವಿದ್ಯಾಲಯದ ಆವರಣದಲ್ಲಿ ಜನ ಹೆಚ್ಚಿದಾಗ ಜನರನ್ನು ತಡೆದು ಹಂತ ಹಂತವಾಗಿ ಒಳ ಕಲಿಸಲಾಯಿತು. ಇದರಿಂದ ಆಕ್ರೋಶಗೊಂಡ ಅನೇಕರು ವಿಶ್ವವಿದ್ಯಾಲಯದ ಆವರಣಕ್ಕೆ ತಡೆಗೋಡೆಗಳನ್ನು ಏರಿ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.