
ಮೈಸೂರು: ‘ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇಲ್ಲ, ಇದ್ದಿದ್ದರೆ ಅತಿ ಕಿರಿಯ ಶಾಸಕ ಆಗುವ ಎಲ್ಲ ಅವಕಾಶ ಇತ್ತು’ ಎಂದು ನಟ ಝೈದ್ ಖಾನ್ ಹೇಳಿದರು.
‘ಬಾಲ್ಯದಿಂದಲೂ ನನಗೆ ಸಿನಿಮಾ ಕ್ಷೇತ್ರದ ಬಗ್ಗೆಯೇ ಹೆಚ್ಚು ಆಸಕ್ತಿ, ನಟನೆ ಬಗ್ಗೆಯೇ ಒಲವು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿ ಫಾರಂ ನೀಡಿದ್ದರೂ ಅದನ್ನು ತೆಗೆದು ನೋಡಲಿಲ್ಲ. ಆಸಕ್ತಿ ಇದ್ದಿದ್ದರೆ ಶಿವಾಜಿನಗರ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಇರಲಿಲ್ಲ. ಅದರ ಬದಲು ರಿಜ್ವಾನ್ ಅರ್ಷದ್ ಗೆಲುವಿಗಾಗಿ ಕೆಲಸ ಮಾಡಿದೆ’ ಎಂದರು.
‘ಲೋಕಿ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ ‘ಕಲ್ಟ್’ ಒಂದು ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ. ಅನಿಲ್ ಕುಮಾರ್ ನಿರ್ದೇಶನ, ರಚಿತಾ ರಾಮ್ ಮತ್ತು ಮಲೈಕಾ ಟಿ.ವಸುಪಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಉತ್ತಮ ದೃಶ್ಯಗಳು ಮೂಡಿಬಂದಿದೆ. 3 ವಿಭಿನ್ನ ಶೇಡ್‌ನಲ್ಲಿ ನನ್ನ ಪಾತ್ರವಿದ್ದು, ಜನರು ಮೆಚ್ಚಲಿದ್ದಾರೆ. ಎಲ್ಲರೂ ಚಿತ್ರವನ್ನು ವೀಕ್ಷಿಸಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
‘ರಾಜ್ಯದಲ್ಲಿ ಚಿತ್ರಮಂದಿರಗಳ ಕೊರತೆ ಇದೆ. ಸಿನಿಮಾ ಟಿಕೆಟ್ ದರಗಳ ಮೇಲೆ ನಿಯಂತ್ರಣ ಇರುವುದು ಒಳಿತು, ಏಕರೂಪ ಟಿಕೆಟ್ ದರದಿಂದ ಪ್ರೇಕ್ಷಕರಿಗೆ ಹಾಗೂ ಏಕ ಪರದೆ ಚಿತ್ರಮಂದಿರಗಳಿಗೆ ಅನುಕೂಲವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.