ADVERTISEMENT

ಮೈಸೂರು | ಆನೆ ದಾಳಿಯಿಂದ ಮಾವುತ ಹರೀಶ್‌ ಸಾವು: ‘ಈ ಸಾವು ನ್ಯಾಯವೇ?’

ಅಂತಿಮ ದರ್ಶನ ಪಡೆದ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 15:39 IST
Last Updated 8 ಆಗಸ್ಟ್ 2020, 15:39 IST
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರು ₹ 10 ಲಕ್ಷ ಮೊತ್ತದ ಚೆಕ್‌ನ್ನು ಹರೀಶ್ ಅವರ ಪತ್ನಿ ಸಂಗೀತಾ ಅವರಿಗೆ ಶನಿವಾರ ಹಸ್ತಾಂತರಿಸಿದರು
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರು ₹ 10 ಲಕ್ಷ ಮೊತ್ತದ ಚೆಕ್‌ನ್ನು ಹರೀಶ್ ಅವರ ಪತ್ನಿ ಸಂಗೀತಾ ಅವರಿಗೆ ಶನಿವಾರ ಹಸ್ತಾಂತರಿಸಿದರು   

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಶನಿವಾರ ಸೇರಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ‘ಹೀಗಾಗಬಾರದಿತ್ತು’ ಎಂದು ಅವರು ಆಡಿಕೊಳ್ಳುತ್ತಿದ್ದರು. ‘ಈ ಸಾವು ನ್ಯಾಯವೇ’ ಎಂಬ ಮಾತು ಅಲ್ಲಿ ಕೇಳಿ ಬರುತಿತ್ತು.

ಆನೆ ದಾಳಿಯಿಂದ ಮೃತಪಟ್ಟ ಹರೀಶ್‌ ಅವರ ಪಾರ್ಥೀವ ಶರೀರದ ದರ್ಶನಕ್ಕೆ ಮೃಗಾಲಯದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು ಎಲ್ಲರನ್ನೂ ಮರುಗುವಂತೆ ಮಾಡಿದವು.

ಹರೀಶ್ ಪತ್ನಿ ಸಂಗೀತಾ ತಮ್ಮ ಎರಡು ಚಿಕ್ಕ ಮಕ್ಕಳೊಂದಿಗೆ ರೋಧಿಸುತ್ತಿದ್ದರು. ಮತ್ತೊಂದು ಕಡೆ ಹರೀಶ್ ಅವರ ತಾಯಿ ಗೋಳಿಡುತ್ತಿದ್ದರು. ಮೃಗಾಲಯದ ಸಿಬ್ಬಂದಿ ಇವರನ್ನು ಸಮಾಧಾನಪಡಿಸಲು ಆಗದೇ ಪರಿತಪಿಸುತ್ತಿದ್ದರು.

ADVERTISEMENT

ಸ್ಥಳಕ್ಕೆ ಬಂದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ₹ 10 ಲಕ್ಷ ಪರಿಹಾರದ ಚೆಕ್ ನೀಡಿದರು. ಆದರೆ, ಮೃತರ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಒಪ್ಪದೆ, ಪತ್ನಿ ಸಂಗೀತಾ ಅವರಿಗೆ ಅನುಕಂಪದ ಉದ್ಯೋಗ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಇವರನ್ನು ಸಮಾಧಾನಪಡಿಸಲು ಅಧಿಕಾರಿಗಳು ಹರಸಾಹಸಪಟ್ಟರು.

‘ಭವಿಷ್ಯನಿಧಿ, ವಿಮೆ ಸೇರಿದಂತೆ ₹ 5 ಲಕ್ಷದಷ್ಟು ಹಣ ಮುಂದಿನ ದಿನಗಳಲ್ಲಿ ಸಿಗಲಿದೆ. ಉದ್ಯೋಗ ನೀಡುವುದು ನಮ್ಮ ಕೈಯಲ್ಲಿಲ್ಲ. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಸಂಬಂಧಿಕರು ಅಂತಿಮ ವಿಧಿವಿಧಾನಕ್ಕೆ ಒಪ್ಪಿಗೆ ನೀಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸಹ ಅಂತಿಮ ದರ್ಶನ ಪಡೆದರು.

ಕುಟುಂಬಕ್ಕೆ ಆಧಾರವಾಗಿದ್ದ ಹರೀಶ್
‘ಹರೀಶ್ ಅವರ ತಂದೆ, ತಾತ, ದೊಡ್ಡಪ್ಪ, ಚಿಕ್ಕಪ್ಪ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದವರೇ ಆಗಿದ್ದರು. ಹಲವು ವರ್ಷಗಳ ಹಿಂದೆಯೇ ತಂದೆ ನಿಧನರಾಗಿದ್ದರು. ಸರಸ್ವತಮ್ಮ ಅವರ ಒಬ್ಬರೇ ಪುತ್ರರಾದ ಹರೀಶ್ ಕುಟುಂಬಕ್ಕೆ ಆಧಾರವಾಗಿದ್ದರು. 4 ವರ್ಷ ಮತ್ತು ಒಂದೂವರೆ ವರ್ಷದ ಮಗು ಹೊಂದಿರುವ ಪತ್ನಿ ಸಂಗೀತಾ ಅವರು ಗೃಹಿಣಿ. ಇವರಿಗೆ ಸ್ವಂತ ಜಮೀನೂ ಇಲ್ಲ. ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ’ ಎಂದು ಲಲಿತಾದ್ರಿಪುರದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.