ADVERTISEMENT

ಬಿಜೆಪಿ ಅಧಿಕಾರಕ್ಕೇರಿದರೆ ಯಾರು ಮಂತ್ರಿ?

ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಶಾಸಕರು, ಜಿಲ್ಲೆಯಲ್ಲೂ ಕುತೂಹಲ

ಅದಿತ್ಯ ಕೆ.ಎ.
Published 25 ಜುಲೈ 2019, 19:49 IST
Last Updated 25 ಜುಲೈ 2019, 19:49 IST
ಎಂ.ಪಿ. ಅಪ್ಪಚ್ಚ ರಂಜನ್‌
ಎಂ.ಪಿ. ಅಪ್ಪಚ್ಚ ರಂಜನ್‌   

ಮಡಿಕೇರಿ: ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಕಾಂಗ್ರೆಸ್‌–ಜೆಡಿಎಸ್ ನೇತೃತ್ವದ ‘ಮೈತ್ರಿ’ ಸರ್ಕಾರ ಪತನವಾಗಿದೆ. ಬಿಜೆಪಿ ಸರ್ಕಾರ ರಚಿಸುವ ಉಮೇದಿನಲ್ಲಿದೆ. ಈ ಬೆಳವಣಿಗೆಯು ಬಿಜೆಪಿಯ ‘ಭದ್ರಕೋಟೆ’ ಕೊಡಗಿನಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.

ಕೊಡಗಿನಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಿದ್ದು 2018ರಲ್ಲಿ ನಡೆದ ಚುನಾವಣೆಯಲ್ಲೂ ಎರಡು ಕಡೆಯೂ ‘ಕಮಲ’ ಅರಳಿತ್ತು. ಮಡಿಕೇರಿಯಿಂದ ಎಂ.ಪಿ.ಅಪ್ಪಚ್ಚು ರಂಜನ್‌ ಗೆದ್ದಿದ್ದರೆ, ಹಿರಿಯ ರಾಜಕಾರಣಿ ಕೆ.ಜಿ.ಬೋಪಯ್ಯ ವಿರಾಜಪೇಟೆಯಿಂದ ಜಯಿಸಿದ್ದರು.

ಒಂದುವೇಳೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬಹುಮತ ಸಾಬೀತು ಮಾಡಿದರೆ ಜಿಲ್ಲೆಯಿಂದ ಯಾರು ಮಂತ್ರಿ ಆಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಮಳೆ, ಚಳಿ, ಮಂಜಿನ ನಡುವೆ ಕಾಫಿ ಹೀರುತ್ತಲೇ ರಾಜಕೀಯ ಆಸಕ್ತರು ಇದೇ ವಿಷಯವನ್ನು ಚರ್ಚಿಸುತ್ತಿದ್ದಾರೆ. ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ADVERTISEMENT

ಬಿಎಸ್‌ವೈ ಆಪ್ತ ಬೋಪಯ್ಯ:

ಕೆ.ಜಿ.ಬೋಪಯ್ಯ ಅವರಿಗೆ 2018ರ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಹೈಕಮಾಂಡ್‌ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಅಪ್ಪಚ್ಚು ರಂಜನ್‌ ಹೆಸರು ಪ್ರಕಟವಾದರೆ, ಮೊದಲೆರಡು ಪಟ್ಟಿಯಲ್ಲೂ ಬೋಪಯ್ಯ ಹೆಸರು ಕಾಣಿಸಿರಲಿಲ್ಲ. ಬೋಪಯ್ಯ ಬೆಂಬಲಿಗರು ಕುಪಿತಗೊಂಡಿದ್ದರು. ನಂತರ ರಾಜ್ಯ ಬಿಜೆಪಿ ವರಿಷ್ಠರನ್ನೂ ಭೇಟಿ ಮಾಡಿದ್ದರು. ಬಿ.ಎಸ್‌. ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಬೋಪಯ್ಯ ಅವರ ಹೆಸರು ಮೂರನೇ ಪಟ್ಟಿಯಲ್ಲಿ ಕಾಣಿಸಿಕೊಂಡು ಆಕ್ರೋಶ ತಣ್ಣಗಾಗಿತ್ತು.

2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದಾಗ ಬೋಪಯ್ಯ, ವಿಧಾನಸಭೆ ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದರು. 2004ರಲ್ಲಿ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಿಂದ ಬೋಪಯ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಮಡಿಕೇರಿಯಿಂದ ವಿರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿ ಅಲ್ಲಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದಾರೆ.

2008, 2013 ಹಾಗೂ 2018ರ ಚುನಾವಣೆಯಲ್ಲಿ ಬೋಪಯ್ಯ ಜಯದ ನಗೆ ಬೀರಿದ್ದಾರೆ. ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದು ಯಡಿಯೂರಪ್ಪ ಆಪ್ತರಾಗಿರುವ ಕಾರಣಕ್ಕೆ ಬೋಪಯ್ಯಗೆ ಸಚಿವ ಸ್ಥಾನ ಲಭಿಸಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಐದು ಬಾರಿ ಗೆದ್ದಿರುವ ರಂಜನ್‌:

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಎಂ.ಪಿ.ಅಪ್ಪಚ್ಚು ರಂಜನ್ ಸಹ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಬೋಪಯ್ಯಗೆ ಮತ್ತೆ ಸ್ಪೀಕರ್‌ ಹುದ್ದೆ ನೀಡಿದರೆ, ರಂಜನ್‌ಗೆ ಸುಲಭವಾಗಿ ಕ್ಯಾಬಿನೆಟ್‌ ಸೇರುವ ಅವಕಾಶ ಸಿಗಲಿದೆ.

ಕೊಡವ ಸಮುದಾಯಕ್ಕೆ ಸೇರಿರುವ ಅಪ್ಪಚ್ಚು ರಂಜನ್ 2008ರಲ್ಲಿ ಕ್ರೀಡಾ ಸಚಿವರಾಗಿದ್ದರು. 1994, 1999, 2008, 2013 ಹಾಗೂ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಬಹಳ ವರ್ಷಗಳ ಬಳಿಕ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಇಬ್ಬರೂ ಆಕಾಂಕ್ಷಿಗಳಾಗಿದ್ದು ವರಿಷ್ಠರು ಹೇಗೆ ಸರಿದೂಗಿಸುತ್ತಾರೆ ಎಂಬುದನ್ನು ನೋಡಬೇಕು. ಒಬ್ಬರಿಗೆ ಮಂತ್ರಿ ಸ್ಥಾನ ನೀಡಿ, ಮತ್ತೊಬ್ಬರಿಗೆ ನಿಗಮ ಮಂಡಳಿಗೆ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.