ರಾಯಚೂರು: ವಿಪತ್ತು, ಅವಘಡ ಸಂಭವಿಸಿದಾಗ ಜನತೆ ರಕ್ಷಣೆ ಬಯಸುತ್ತಾರೆ. ಎಂಥದ್ದೇ ಪರಿಸ್ಥಿತಿ ಇದ್ದರೂ ನಿಭಾಯಿಸಿ ಸಾರ್ವಜನಿಕರ ಪ್ರಾಣ, ಆಸ್ತಿ ಸಂರಕ್ಷಣೆ ವಿಪತ್ತು ನಿರ್ವಹಣಾ ಪಡೆಯ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿ ಶಾಮಕ ಇಲಾಖೆ, ಎನ್‌ಸಿಸಿ 35 ಬಟಾಲಿಯನ್ ಹಾಗೂ ವಾರ್ತಾ ಇಲಾಖೆ ಅಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಪತ್ತುಗಳು ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ 2009ರಲ್ಲಿ ವಿಪತ್ತು ಸಂಭವಿಸಿ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾಗ ವಿಪತ್ತು ನಿರ್ವಹಣಾ ಘಟಕಗಳು ಸಮರ್ಥವಾಗಿ ಕಾರ್ಯನಿರ್ವಹಿಸಿ ಜವಾಬ್ದಾರಿ ಮೆರೆದವು. ಆತ್ಮಸ್ಥೈರ್ಯದಿಂದ ಪರಿಸ್ಥಿತಿ ನಿಭಾಯಿಸುವ ಚಾಣಾಕ್ಷತನ, ಸುರಕ್ಷತೆ ಮಾರ್ಗೋಪಾಯಗಳ ಬಗ್ಗೆ ಸದಾ ವಿಪತ್ತು ನಿರ್ವಹಣ ತಂಡಗಳು ಗಮನಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿವೆ. ಪವರ್ ಗ್ರಿಡ್‌ನಂಥ ಬೃಹತ್ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ಜಾಲಗಳಿವೆ. ಒಂದು ವೇಳೆ ಅವಘಡ ಸಂಭವಿಸಿದರೆ ತುರ್ತಾಗಿ ನಿಭಾಯಿಸಲು ಸದಾ ಸಿದ್ಧವಾಗಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಗೃಹ ರಕ್ಷಕದ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ನೀಡಿದರು. ಜಿಲ್ಲಾಡಳಿತ ಕಚೇರಿಯಿಂದ ಜನಜಾಗೃತಿ ಜಾಥಾ ನಡೆಯಿತು. ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ, ಎನ್‌ಸಿಸಿ ಅಧಿಕಾರಿ ಸುಬೇದಾರ ನಾಗೇಶ ಜಾಧವ್, ಡಾ.ಶ್ರೀಧರರೆಡ್ಡಿ, ಶಿಕ್ಷಣ ಅಧಿಕಾರಿ ಇಂದಿರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.