ADVERTISEMENT

ಅಚ್ಚುಕಟ್ಟು ಪ್ರದೇಶಕ್ಕೆ ನೀರು ಅಭಾವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 6:25 IST
Last Updated 8 ಏಪ್ರಿಲ್ 2011, 6:25 IST
ಅಚ್ಚುಕಟ್ಟು ಪ್ರದೇಶಕ್ಕೆ ನೀರು ಅಭಾವ
ಅಚ್ಚುಕಟ್ಟು ಪ್ರದೇಶಕ್ಕೆ ನೀರು ಅಭಾವ   

ಲಿಂಗಸುಗೂರ: ನಾರಾಯಣಪುರ ಅಣೆಕಟ್ಟೆ ಗುಲ್ಬರ್ಗ, ಯಾದಗಿರಿ, ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರ ಜೀವ ನಾಡಿಯಾಗಿದೆ. ಅಣೆಕಟ್ಟೆ ನಿರ್ಮಾ ಣದ ಉದ್ದೇಶ, ಅದರಿಂದ ರೈತರು ಬಳಸಬಹುದಾದ ನೀರಿನ ಪ್ರಮಾಣದ ಜಾಗೃತಿ ಕೊರತೆಯಿಂದ ಪ್ರತಿ ವರ್ಷ ನೀರಿನ ಕೊರತೆ ಎದುರಾಗುತ್ತಿದೆ. ಇದ್ಯಾವುದನ್ನು ಲೆಕ್ಕ ಹಾಕದ ರೈತರು ಅತಿ ಹೆಚ್ಚು ನೀರು ಬಳಕೆಯಾಗುವ ವಾಣಿಜ್ಯ ಬೆಳೆಗಳಿಗೆ ಮೊರೆ ಹೋಗಿ ರುವುದು ನೀರಿನ ಅಭಾವಕ್ಕೆ ಮೂಲ ಕಾರಣ ಎಂಬುದು ತಜ್ಞರ ಅಭಿಮತ.

ನಾರಾಯಣಪುರ ಅಣೆಕಟ್ಟೆ ವ್ಯಾಪ್ತಿಯಲ್ಲಿ ನಾರಾಯಣಪುರ ಬಲ ದಂಡೆ ನಾಲೆ, ರಾಂಪೂರ ಏತ ನೀರಾವರಿ ಯೋಜನೆ, ನಾರಾಯ ಣಪುರ ಎಡದಂಡೆ ನಾಲೆ, ಶಹಾಪುರ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ, ಇಂಡಿ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ, ಇಂಡಿ ಏತ ನೀರಾವರಿ ಯೋಜನೆ, ರಾಜನಕೊಳೂರು ಏತ ನೀರಾವರಿ ಯೋಜನೆ ಒಳಗೊಂಡತೆ ಅಂದಾಜು 5.56ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ.

ನೀರಾವರಿ ಸಲಹಾ ಸಮಿತಿ ನಿರ್ಣಯದ ಪ್ರಕಾರ ಮಾರ್ಚ 31ಕ್ಕೆ ನೀರು ಹರಿಸುವುದು ಕೊನೆಯಾಗಿದೆ. ರೈತರ ಪ್ರತಿಭಟನೆ, ಧರಣಿಗೆ ಸ್ಪಂದಿಸಿದ ಅಧಿಕಾರಿಗಳು ಆಲಮಟ್ಟಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡಿಸಿಕೊಂಡು ಏಪ್ರಿಲ್ 15ರ ವರೆಗೆ ಸಾಧ್ಯವಾದಷ್ಟು ನೀರು ಹರಿಸುವ ಹರಸಾಹಸ ನಡೆಸಿದ್ದಾರೆ. ಆದರೆ, ಪ್ರಸ್ತುತ ರೈತರ ಜಮೀನುಗಳಲ್ಲಿ ಬೆಳೆದು ನಿಂತ ಭತ್ತ ಮತ್ತು ಇತರೆ ಬೆಳೆ ನೋಡಿದರೆ ಕನಿಷ್ಟ ಇನ್ನೂ ಒಂದು ತಿಂಗಳು ನೀರು ಹರಿಸುವುದು ಅನಿವಾರ್ಯ ಎಂಬುದು ರೈತರ ಅಂಬೋಣ.

ಈ ವರ್ಷ ರೈತರು ಫೆಬ್ರುವರಿ ತಿಂಗಳದ ಕೊನೆವರೆಗೆ ಭತ್ತ, ಇತರೆ ಬೆಳೆ ನಾಟಿಮಾಡಿಕೊಂಡಿರುವುದು ಮತ್ತಷ್ಟು ಕಗ್ಗಂಟಾಗಿದೆ. ಅಣೆಕಟ್ಟೆ ಅಧಿಕಾರಿಗಳು ಏನು ಮಾಡುತ್ತಾರೊ ಗೊತ್ತಿಲ್ಲ. ತಮ್ಮ ಜಮೀನಿನಲ್ಲಿ ಬೆಳೆ ಇರುವವರೆಗೆ ಅಗತ್ಯವಿರುವಷ್ಟು ನೀರು ಹರಿಸಬೇಕು. ಇಲ್ಲವಾದಲ್ಲಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಅನಿವಾರ್ಯವಾದರೆ ಜೀವ ಕಳೆದುಕೊಳ್ಳಲು ಸಿದ್ಧ ಎಂದು ಕರ್ನಾಟಕ ರೈತ ಸಂಘದ ಮುಖಂಡ ಶರಣಪ್ಪ ಮಳ್ಳಿ ಸವಾಲು ಹಾಕಿದ್ದಾರೆ.

ಅಣೆಕಟ್ಟೆ ನೀರಿನ ಗರಿಷ್ಠ ಮಟ್ಟ 492.252 ಇದ್ದು ಈಗಾಗಲೆ 3-4ಮೀಟರ್ ನೀರನ್ನು ಆಲಮಟ್ಟಿ ಅಣೆಕಟ್ಟೆಯಿಂದ ಬಿಡಿಸಿಕೊಳ್ಳಲಾ ಗಿದೆ. ಸಧ್ಯದಲ್ಲಿ ಅಣೆಕಟ್ಟೆಯಲ್ಲಿ 486.720ಮೀ. ಮಾತ್ರ ನೀರು ಬಾಕಿ ಉಳಿದಿದೆ. ನಾಲೆಗಳ ಎಲ್ಲಾ ಕ್ರೆಸ್ಟ್ ಗೇಟ್ ಎತ್ತಿದರು ಕೂಡ ಎರಡು ದಿನ ನೀರು ಹರಿಸಬಹುದಾಗಿದೆ. ಆಲ ಮಟ್ಟಿಗೆ ಹೆಚ್ಚಿನ ನೀರು ಬಿಡಲು ಮನವಿ ಮಾಡಿಕೊಳ್ಳಲಾಗಿದೆ. ಅಲ್ಲಿಯೂ ನೀರು ಸಂಗ್ರಹಣ ಕೊರತೆ ಇರುವುದರಿಂದ ಏಪ್ರಿಲ್ 15ರ ವರೆಗೆ ಇದ್ದಷ್ಟು ನೀರನ್ನು ಬಿಡಲಾಗುವುದು ಎಂದು ಮೂಲಗಳು ದೃಢಪಡಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.