ADVERTISEMENT

ಅಧಿಕಾರಿಗಳ ವಿಳಂಬ ಧೋರಣೆ: ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 11:02 IST
Last Updated 21 ಜೂನ್ 2013, 11:02 IST

ರಾಯಚೂರು: ಭೂಮಿ ವರ್ಗಾವಣೆ, ಪಡಿತರ ಚೀಟಿ, ಪಹಣಿ ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಜನತೆಗೆ ಶೀಘ್ರವಾಗಿ ಸಿಗಬೇಕಾದ ಸೇವಾ ಸೌಲಭ್ಯ ದೊರಕುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.

ತಾಲ್ಲೂಕು ಘಟಕ ಹಮ್ಮಿಕೊಂಡ ಧರಣಿಯಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಪಾಲ್ಗೊಂಡು ಜನತೆಗೆ ಆಗುತ್ತಿರುವ ತೊಂದೆರೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಕಂದಾಯ ಇಲಾಖೆಯಿಂದ ಪಹಣಿ ಪಡೆಯಲು ಒಂದು ವಾರ ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ  ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಮೀನು ಸರ್ವೆ ಹಾಗೂ ವರ್ಗಾವಣೆ ಮಾಡಲು ಮನವಿ ಸಲ್ಲಿಸಿದರೂ ವಿಳಂಬವಾಗುತ್ತಿವೆ ಎಂದು ವಿವರಿಸಿದರು.

ಪಡಿತರ ಚೀಟಿದಾರರಿಗೆ ಗ್ರಾಮೀಣ ಪ್ರದೇಶದಲ್ಲಿ ಅಕ್ಕಿ, ಗೋಧಿ, ಸೀಮೆಎಣ್ಣೆಯನ್ನು ತಿಂಗಳಲ್ಲಿ ಒಂದು ಅಥವಾ ಎರಡು ದಿನ ಮಾತ್ರ ವಿತರಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕಡ್ಡಾಯವಾಗಿ 15 ದಿನ ವಿತರಣೆ ಮಾಡಬೇಕು. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು

ಎಂದು ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಗರಾವ್ ಕುಲಕರ್ಣಿ, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ತಹಶೀಲ್ದಾರ್‌ಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯ ಘಟಕದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಹಾಗೂ ಪದಾಧಿಕಾರಿಗಳಾದ ಬೂದಯ್ಯಸ್ವಾಮಿ, ಜಯಪ್ಪಸ್ವಾಮಿ, ಬಿ.ವೆಂಕಟೇಶ, ಕುರಬದೊಡ್ಡಿ ನರಸಪ್ಪ, ಎಸ್.ವೆಂಕಟೇಶ, ಜಿ.ಹುಲಿಗೆಪ್ಪ ಜಾಲಿಬೆಂಚಿ, ತಿಕ್ಕಯ್ಯ, ಮಾಸದೊಡ್ಡ ನಸರಣ್ಣ, ಭೂಪಯ್ಯಗೌಡ, ಮಲ್ಲೇಶ ಮಂಡಲಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.