ADVERTISEMENT

ಆರೋಪಕ್ಕೆ ಈಗಲೂ ಬದ್ಧ: ಕೊಡ್ಲಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 6:15 IST
Last Updated 9 ಜುಲೈ 2012, 6:15 IST

ಕವಿತಾಳ: ಮಾನ್ವಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ಸಂಘಟನೆ ಬದ್ಧವಾಗಿದೆ ಎಂದು ಕೈ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1966ರ ಎಪಿಎಂಸಿ ವ್ಯವಹಾರ ಅಧಿನಿಯಮ (22)ರ ಪ್ರಕಾರ ಯಾವ ಉದ್ದೇಶಕ್ಕಾಗಿ ನಿವೇಶನ ಖರೀದಿಸಲಾಗಿದೆಯೋ ಅದೇ ಉದ್ದೇಶಕ್ಕೆ ಬಳಕೆಯಾಗಬೇಕು ದುರುಪಯೋಗ ಮಾಡಿದರೆ ಕ್ರಮಕೈಗೊಳ್ಳಲು ಸಮಿತಿಗೆ ಅಧಿಕಾರವಿದೆ.
 
ಸಮಿತಿ ಆವರಣದಲ್ಲಿ ಅಕ್ರಮವಾಗಿ ಮೊಬೈಲ್ ಟವರ್‌ಗಳನ್ನು ನಿರ್ಮಿಸಲಾಗಿದೆ, ಗೋದಾಮು ನಿರ್ಮಿಸಲು ಅನುಮತಿ ಪಡೆದು ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದರೂ ಅಧ್ಯಕ್ಷರು ಕ್ರಮ ಕೈಗೊಂಡಿಲ್ಲ ಎಂದು ದಾಖಲೆ ಮತ್ತು ಭಾವಚಿತ್ರ ಸಮೇತ ಆರೋಪಿಸಿದರು.
 
ಸ್ವಾಭಿಮಾನಿ ರೈತರು ಮತ್ತು ಪ್ರಾಮಾಣಿಕ ವರ್ತಕರ ಬಗ್ಗೆ ತಮಗೆ ಗೌರವ ಇದ್ದು ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ನಿಂದಿಸಿಲ್ಲ ಬದಲಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು. ಎಪಿಎಂಸಿ ಅವ್ಯವಹಾರ ಕುರಿತು ದಾಖಲೆಗಳ ಸಹಿತ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಅಕ್ರಮ ಸಾಬೀತಾದರೆ ಎಪಿಎಂಸಿ ಅಧ್ಯಕ್ಷರು ರಾಜಕೀಯ ಸನ್ಯಾಸ ಸ್ವೀಕರಿಸಲಿ, ಆರೋಪ ಸುಳ್ಳಾದರೆ ಅಧ್ಯಕ್ಷರ ಮನೆಯಲ್ಲಿ ಜೀತಕ್ಕೆ ಇರುತ್ತೇನೆ ಎಂದು ಪ್ರಭುರಾಜ ಕೊಡ್ಲಿ ಸವಾಲು ಹಾಕಿದರು.
 
ಜಿಲ್ಲಾಧ್ಯಕ್ಷ ಗಂಗಾಧರಸ್ವಾಮಿ, ಶಾಂತಪ್ಪ ಕಪಗಲ್, ಅಮರೇಶ ಗಿರಿಜಾಲಿ ಮತ್ತು ಶರಣಯ್ಯಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.