ADVERTISEMENT

ಆಲಿಕಲ್ಲು ಮಳೆ: ಪರಿಹಾರ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 6:56 IST
Last Updated 11 ಮಾರ್ಚ್ 2014, 6:56 IST

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಕಳೆದ ಹತ್ತು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಸುರಿದ ಅಕಾಲಿಕ ಮಳೆ ಹಾಗೂ ಶುಕ್ರವಾರ ಸುರಿದ ಧಾರಾಕಾರ ಆಲಿಕಲ್ಲು ಮಳೆಗೆ ತೋಟಗಾರಿಕೆ, ಕೃಷಿ, ರೇಷ್ಮೆ ಬೆಳೆಗಳು, ಜಾನುವಾರು ಆಸ್ತಿ ಸೇರಿದಂತೆ ಅಂದಾಜು ₨ 50 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಕೂಡಲೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಪಡಿಸಿದೆ.

ಸೋಮವಾರ ರಾಜ್ಯ ಘಟಕದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಟಿ. ಯೋಗೇಶ ಅವರಿಗೆ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು, ಶತಮಾನದಲ್ಲಿ ಕಂಡರಿಯದ ಆಲಿಕಲ್ಲು ಮಳೆಗೆ ಯಳಗುಂದಿ, ಗುಂತಗೋಳ, ಅಮರೇಶ್ವರ, ದೇವರಭೂಪುರ ಸೇರಿದಂತೆ ಸುತ್ತಮುತ್ತದ ಜನತೆ ಬದುಕು ಕಳೆದುಕೊಂಡು ಬೀದಿಪಾಲಾಗಿದ್ದಾರೆ.

ಅಲ್ಲದೆ, ತಾಲ್ಲೂಕಿನ ಮುದಗಲ್ಲು, ಗುರುಗುಂಟಾ, ಮಸ್ಕಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಿಂದ ಜೋಳ ಸೇರಿದಂತೆ ವಿವಿಧ ಬೆಳೆಗಳು ರಾಶಿ ಮಾಡುವ ಹಂತದಲ್ಲಿ ಮಳೆಪಾಲಾಗಿ ನಷ್ಟ ಸಂಭವಿಸಿದೆ. ಈ ಕುರಿತು ಆಯಾ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ರೈತರು ಮತ್ತು ಜನ ಸಮೂಹಕ್ಕೆ ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟ ಭರ್ತಿ ಮಾಡಿಕೊಡುವಂತೆ ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದೇಶ ಗೌಡೂರು. ರೈತ ಮುಖಂಡರಾದ ಗ್ಯಾನಪ್ಪ ಕಾಚಾಪುರ, ಶಿವಣ್ಣ ಭೂಪುರ, ಗಂಗಪ್ಪ ಯರಗೋಡಿ, ಅಮರಯ್ಯಸ್ವಾಮಿ ಹುಲಿಗುಡ್ಡ, ಅಮರೇಶ ಗೌಡೂರು, ಶರಣಗೌಡ ಪಾಟೀಲ, ಹುಸೇನಸಾಬ ಗುಂತಗೋಳ. ದಲಿತ ಸಂಘಟನೆಗಳ ಮುಖಂಡರಾದ ಪ್ರಭುಲಿಂಗ ಮೇಗಳಮನಿ, ಶಿವಪ್ಪ ಮಾಚನೂರು, ಲಿಂಗಪ್ಪ ಪರಂಗಿ, ಸಂಜೀವಪ್ಪ ಹುನಕುಂಟಿ ಮತ್ತಿತರರು ಪಾಲ್ಗೊಂಡಿದ್ದರು.

ತಾಪಂ ನಿಯೋಗ ಒತ್ತಾಯ: ತಾಲ್ಲೂಕಿನ ಗುಂತಗೋಳ, ಯಳಗುಂದಿ, ಅಮರೇಶ್ವರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಂಕಷ್ಟಕ್ಕೆ ಸಿಲುಕಿದ ರೈತರು ಮತ್ತು ಸಾಮಾನ್ಯ ಜನತೆಗೆ ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಆಡಳಿತ ಮಂಡಳಿ ತಾಪಂ ಅಧ್ಯಕ್ಷೆ ಬಸಮ್ಮ ಪರಮಾತ್ಮ ನೇತೃತ್ವದ ನಿಯೋಗವು ಉಪವಿಭಾಗಾಧಿಕಾರಿ ಟಿ. ಯೋಗೇಶ ಅವರನ್ನು ಒತ್ತಾಯಿಸಿತು.

ಆಲಿಕಲ್ಲು ಮಳೆ ಸುರಿದು ನಾಲ್ಕು ದಿನಗಳಾದರು ಇಂದಿಗೂ ನಷ್ಟದ ಬಗ್ಗೆ ಯಾವುದೇ ಇಲಾಖೆ ಅಧಿಕಾರಿ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಬಿಳಿಜೋಳ, ಶೇಂಗಾ, ಉಳ್ಳಾಗಡ್ಡಿ, ಭತ್ತ, ಜಾನುವಾರು ಹಾನಿ ಬಗ್ಗೆ ವಿಶೇಷ ಸಭೆ ಕರೆದು ಸಮಗ್ರ ವರದಿ ಕ್ರೂಡೀಕರಿಸಬೇಕು. ತಾಲ್ಲೂಕಿನಲ್ಲಿ ಅಕಾಲಿಕ ಮಳೆಯಿಂದ ಸಂಭವಿಸಿದ ನಷ್ಟದ ಬಗ್ಗೆ  ವರದಿ ಸಿದ್ಧಪಡಿಸುವಂತೆ ಆಗ್ರಹಿಸಿದರು.

ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಗೌಡ ತುರಡಗಿ. ಸದಸ್ಯರಾದ ಗುಂಡಮ್ಮ ದುರುಗಪ್ಪ, ಮಲ್ಲಪ್ಪ ಕಾಚಾಪುರ, ದುರುಗಮ್ಮ ಸಂಗಪ್ಪ, ಲಕ್ಷ್ಮಿ ಆದಪ್ಪ, ಸಂಗಮ್ಮ ಸಿದ್ಧನಗೌಡ, ನಾಗವೇಣಿ ಸುರೇಶ, ಬಸಯ್ಯ ಸಾಹುಕಾರ, ಪರಸಪ್ಪ ಹುನಕುಂಟಿ, ನಿರ್ಮಲಾ ಬೈಲಪ್ಪ, ಯಮನವ್ವ ಹನುಮಂತಪ್ಪ ಮೊದಲಾವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.