ADVERTISEMENT

ಒಪೆಕ್ ಆಸ್ಪತ್ರೆ ಆರಂಭಕ್ಕೆ ಒತ್ತಾಯ: ಧರಣಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:50 IST
Last Updated 2 ಅಕ್ಟೋಬರ್ 2012, 4:50 IST

ರಾಯಚೂರು: ಒಪೆಕ್ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯ ಹಣ ಬಿಡುಗಡೆ ಕೂಡಲೇ ಮಾಡಬೇಕು. ಹುದ್ದೆ ಮಂಜೂರಾತಿ ಮಾಡಿ  ಆಸ್ಪತ್ರೆಯನ್ನು ಆರಂಭ ಮಾಡಬೇಕು. ಇದೇ 15ರೊಳಗೆ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಮಾತು ತಪ್ಪಿದ ಸರ್ಕಾರ ಎಂಬ ಘೊಷವಾಕ್ಯದೊಂದಿಗೆ ಅನಿರ್ದಿಷ್ಟ ಹೋರಾಟ ನಡೆಸುವುದಾಗಿ ಸೋಮವಾರ ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಧರಣಿ ನಡೆಸಿದರು. ಸತತ 57 ದಿನ ಹೋರಾಟ ನಡೆಸಲಾಯಿು. ಬಳಿಕ ಒಪೆಕ್ ಆಸ್ಪತ್ರೆಯನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ ಮುಂದುವರಿಸುವುದು, ಕಳೆದ 11 ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ದುಡಿದ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಮುಂದುವರಿಸುವ ತೀರ್ಮಾಣ ಸರ್ಕಾರ ಕೈಗೊಂಡಿತು.

ಆಗಸ್ಟ್ 1ರಂದು ಮುಖ್ಯಮಂತ್ರಿಗಳು ಸಭೆ ನಡೆಸಿ ಹಣ ದೊರಕಿಸುವ ಬಗ್ಗೆ ಘೋಷಣೆ ವ್ಯಕ್ತವಾಯಿತು. ಸರ್ಕಾರದ ಆದೇಶದಂತೆ ಆಸ್ಪತ್ರೆಯ ಆರಂಭಕ್ಕೆ 40 ಕೋಟಿ ರೂಪಾಯಿ ಅಂದಾಜಿನ ಕ್ರಿಯಾ ಯೋಜನೆ ತಯಾರಿಸಿ ಸಂಬಂಧಪಟ್ಟವರಿಗೆ ಸಲ್ಲಿಸಿ ಒಂದುವರೆ  ತಿಂಗಳಾಗಿದೆ.  ವಿಶೇಷಾಧಿಕಾರಿ ನೇಮಕಗೊಂಡಿದ್ದಾರೆ. ರಿಮ್ಸನಿಂದ ಆಸ್ಪತ್ರೆಯನ್ನು ವಿಶೇಷಾಧಿಕಾರಿ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮಾತ್ರ ಮುಗಿದಿದೆ.

  ಹಣ ಬಿಡುಗೆ ನಿರೀಕ್ಷೆಯಾಗಿ ಉಳಿದಿದೆ. 5 ತಿಂಗಳಿಂದ ಕೆಲಸವಿಲ್ಲದೇ 286 ಸಿಬ್ಬಂದಿ ಆ್ಪಸ್ಪತ್ರೆಯ ಆರಂಭಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ನೌಕರರು 47 ದಿನದ ಸಂಬಳ ಹಾಗೂ ಅಂದಾಜು 4 ಕೋಟಿಯಷ್ಟು ವೇತನ ವ್ಯತ್ಯಾಸ, ಬೋನಸ್ ಹಣವನ್ನು ಇದುವರೆಗೂ ಅಪೋಲೊ ಸಂಸ್ಥೆ ಪಾವತಿಸಿಲ್ಲ. ಸರ್ಕಾರದಿಂದ ಆ ಸಂಸ್ಥೆಗೆ ಬರಬೇಕಾದ ಹಣ ದೊರಕುವವರೆಗೂ ಸಿಬ್ಬಂದಿಗೆ ಹಣ ಕೊಡುವುದಿಲ್ಲ ಎಂದು ಸಂಸ್ಥೆ ಹೇಳುತ್ತಿದೆ. ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಸಂಚಾಲಕ ಆರ್ ಮಾನಸಯ್ಯ, ನೌಕರರ ಸಂಘದ ಅಧ್ಯಕ್ಷ ವಾಜೀದ್ ಹಾಗೂ ನೌಕರರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.