ರಾಯಚೂರು: ಕನ್ನಡ ಸಾಹಿತ್ಯ ಪರಿಷತ್‌ಗಾಗಿ ನಾಲ್ಕು ಕೋಟಿ ಸಂಚಿತ ನಿಧಿ ಸ್ಥಾಪನೆ, ಪರಿಷತ್ ಮೂಲಕ ಕರ್ನಾಟಕವನ್ನು ಭಾವನಾತ್ಮಕವಾಗಿ ಒಂದು ಎಂಬ ಭಾವನೆ ಮೂಡಿಸುವ ದಿಶೆಯಲ್ಲಿ ಪ್ರಯತ್ನ ಮಾಡುವುದು, ರಾಜ್ಯದ ಹಿಂದುಳಿದ ಪ್ರದೇಶ ಅಭಿವೃದ್ಧಿ ವಿಶೇಷ ಯೋಜನೆ ರೂಪಿಸುವುದು, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪರಿಷತ್ ತನ್ನದೇ ಆದ ನಿವೇಶನ ಮತ್ತು ಕಟ್ಟಡ ಹೊಂದುವಂತೆ ಮಾಡುವುದು ತಮ್ಮ ಪ್ರಮುಖ ಆಶಯಗಳಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಂಡ್ಯದ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿ ನಾಡಿನಲ್ಲಿ ಕನ್ನಡ ಚಟುವಟಿಕೆ ಹೆಚ್ಚು ನಡೆಸುವುದು, ಯುವಜನತೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯ ಚಟುವಟಿಕೆಗಳ ಬಗ್ಗೆ ತಿಳಿಸಿಕೊಡುವುದು, ಪ್ರತಿ ಜಿಲ್ಲೆಯ ಲೇಖಕರ ಮಾಹಿತಿ ಕೋಶಗಳನ್ನು ಪ್ರಕಟಿಸುವುದು, ಜನಪದ ಕಲೆ ಸಾಹಿತ್ಯ ಪ್ರದರ್ಶನಗಳಿಗೆ ವಿಶೇಷ ಆದ್ಯತೆ ನೀಡಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಉದ್ದೇಶವಿದೆ ಎಂದು ಹೇಳಿದರು.
ಪ್ರಮುಖ ಪ್ರಾಚೀನ ಕಾವ್ಯಗಳ ಹೊಸ ಆಲೋಚನೆಗಳಿಗೆ ಒಳಪಡಿಸಿ ವಿಮರ್ಶಾ ಗ್ರಂಥಗಳನ್ನು ಪ್ರಕಟಿಸುವುದು, ವಿಮರ್ಶೆ, ಛಂದಸ್ಸು, ಮೀಮಾಂಸೆ ಮುಂತಾದ ಸಾಹಿತ್ಯ ಸಂಬಂಧಿ ಶಾಸ್ತ್ರಗಳಿಗೆ ಸಂಬಂಧಿಸಿದ ಮೌಲಿಕ ಗ್ರಂಥ ಪ್ರಕಟಿಸುವುದು, ಪ್ರಾದೇಶಿಕ ಪದಕೋಶ ಪ್ರಕಟಿಸುವುದು, ಸಮಕಾಲೀನ ಸಂದರ್ಭದ ಹೆಸರಾಂತ ಕನ್ನಡ ವಿದ್ವಾಂಸರನ್ನು ಪರಿಷತ್ ಕಾರ್ಯದಲ್ಲಿ ಮೂರು ವರ್ಷ ನಿರಂತರವಾಗಿ ತೊಡಗಿಸಿಕೊಳ್ಳುವ ಯೋಜನೆಗಳನ್ನು ತಯಾರಿಸಿ ಸರ್ಕಾರದ ಅನುದಾನ ಪಡೆದು ಆಗುವಂತೆ ಮಾಡುವುದು ಆಶಯವಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಪರಿಷತ್‌ನ ಸಂಶೋಧನಾ ವಿಭಾಗವನ್ನು ಚುರುಕುಗೊಳಿಸುವುದು, ಜನಪದ ವಿಶ್ವಕೋಶದ ಪರಿಷ್ಕರಣೆ ಹಾಗೂ ಅದನ್ನು ಪೂರ್ಣಗೊಳಿಸುವುದು, ನಿಘಂಟು ಪರಿಷ್ಕರಣೆ ಮತ್ತು ಮುದ್ರಣ ಒತ್ತು ಕೊಡಲಾಗುವುದು ಎಂದು ಹೇಳಿದರು.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಸಂಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಮಂಡ್ಯ ಕರ್ನಾಟಕ ಸಂಘ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸಾಹಿತ್ಯ, ಸಂಸ್ಕೃತಿ, ಸಂಘಟನೆ, ರಂಗಭೂಮಿ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಗೆಳೆಯರ ಬಳಗ, ಜನದನಿ ಸಂಘಟನೆಗಳನ್ನು ಕಟ್ಟಿ ಕನ್ನಡದ ಹಲವು ಪ್ರಸಿದ್ಧ ನಾಟಕಗಳನ್ನು ಮಂಡ್ಯ, ಬೆಂಗಳೂರು, ದೆಹಲಿ ಮೊದಲಾದ ಸ್ಥಳಗಳಲ್ಲಿ ಯಶಸ್ವಿ ಪ್ರಯೋಗ ಮಾಡಿಸಿದ್ದೇನೆ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ರಚನಾತ್ಮಕ ಕೆಲಸ ಮಾಡಿದ್ದೇನೆ. ಕರ್ನಾಟಕ ನಾಟಕ ಆಕಡೆಮಿ ಸದಸ್ಯನಾಗಿ, ಜನಪದ ಪರಿಷತ್‌ನ ಟ್ರಸ್ಟಿಯಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಗಮನಾರ್ಹ ಕೆಲಸ ಮಾಡಿದ್ದೇನೆ. ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ನಾಟಕ ಆಕಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ಉದಯವಾಗಿ 56 ವರ್ಷ ಕಳೆದಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಮಂದಿ ಇಂದಿಗೂ ಭಾವನಾತ್ಮಕವಾಗಿ ಒಂದುಗೂಡಿಲ್ಲ ಎಂಬುದು ನನಗೆ ಗಾಢವಾಗಿ ಕಾಡಿದೆ. ಇದನ್ನು ಹೋಗಲಾಡಿಸಿ ಭಾವನಾತ್ಮಕವಾಗಿ ಒಂದು ಮಾಡುವುದು, ಸಾಹಿತ್ಯ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ನಡೆಸುವುದು. ಊಟಕ್ಕೇ ಹೆಚ್ಚು ಆದ್ಯತೆ ಕೊಡದೇ ಸಾಹಿತ್ಯ ಪರ ಚರ್ಚೆ, ಗೋಷ್ಠಿ, ಚಟುವಟಿಕೆಗೆ ಆದ್ಯತೆ ನೀಡುವುದು ತಮ್ಮ ಆಶಯವಾಗಿದೆ. ಇದೇ 29ರಂದು ಚುನಾವಣೆ ನಡೆಯಲಿದ್ದು, ತಮ್ಮನ್ನು ಆಯ್ಕೆ ಮಾಡಲು ಸಂಬಂಧಪಟ್ಟ ಮತದಾರರಲ್ಲಿ ಕೋರುತ್ತಿರುವುದಾಗಿ ತಿಳಿಸಿದರು.
ಪ್ರೊ. ಜಯಪ್ರಕಾಶಗೌಡ ಅವರದು ಹಾಗೂ ತಮ್ಮ ಸ್ನೇಹ ಸುಮಾರು 25 ವರ್ಷ ಹಳೆಯದು. ಕ್ರಿಯಾಶೀಲ, ಸಾಹಿತ್ಯ, ಸಂಘಟನೆ, ರಂಗ ಚಟುವಟಿಕೆಯಲ್ಲಿ ಹೆಚ್ಚು ಕೆಲಸ ಮಾಡಿದವರು. ಇಂಥವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದರೆ ಒಳ್ಳೆಯ ಭವಿಷ್ಯವಿದೆ ಎಂದು ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದೊಡ್ಡಬಳ್ಳಾಪುರದ ಉಪನ್ಯಾಸಕ ಎನ್.ಪಿ ಚಂದ್ರಶೇಖರಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಬಾಗಲಕೋಟೆಯ ವಿ.ಆರ್ ಪೊಲೀಸ್ ಪಾಟೀಲ್, ವೈ.ಕೆ ಚಂದ್ರಶೇಖರ, ಎಂ.ಬಿ.ಪಾಟೀಲ್ ವಾಜೀದ್, ಹನುಮಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.