ADVERTISEMENT

ಕಾರ್ಡ್ ಹಂಚಿಕೆ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 5:55 IST
Last Updated 17 ಆಗಸ್ಟ್ 2012, 5:55 IST

ಲಿಂಗಸುಗೂರ: ಕಳೆದ ನಾಲ್ಕಾರು ತಿಂಗಳಿಂದ ತಾತ್ಕಾಲಿಕ ಪಡಿತರ ಕಾರ್ಡ್‌ದಾರರಿಗೆ ಭಾವಚಿತ್ರ ತೆಗೆದು ಶಾಶ್ವತ ಪಡಿತರ ಕಾರ್ಡ್ ನೀಡುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಗುರುವಾರ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಫಲಾನುಭವಿಗಳು ಆಹಾರ ಶಿರಸ್ತೆದಾರ ಅಣ್ಣಪ್ಪ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕೇಂದ್ರಕ್ಕೆ ದೂರದ 25-30ಕಿ.ಮೀ. ಅಂತರದ ಗ್ರಾಮೀಣ ಪ್ರದೇಶಗಳಿಂದ ನಿಗದಿತ ದಿನ ಬಂದು ಹೋಗುವುದು ಸಾಕಾಗಿ ಹೋಗಿದೆ. ನೆಮ್ಮದಿ ಕೇಂದ್ರಗಳಲ್ಲಿ ಮನಸೋ ಇಚ್ಛೆ ಫೀ ಪಡೆದುಕೊಂಡಿದ್ದಾರೆ. ನಾಲ್ಕು ತಿಂಗಳಲ್ಲಿ 10-11ಬಾರಿ ತಹಸೀಲ ಕಚೇರಿಗೆ ಬಂದು ಹೋಗಿದ್ದೇವೆ. ಒಂದು ಕಾರ್ಡ್ ಪಡೆದುಕೊಳ್ಳಲು ರೂ. 700 ರಿಂದ 800 ಹಣ ಖರ್ಚು ಮಾಡಿಕೊಂಡಿದ್ದೇವೆ ಎಂದು ದೂರಿದರು.

ಸಿಬ್ಬಂದಿ ಕೊರತೆ, ಕಂಪ್ಯೂಟರ್ ದುರಸ್ತಿ, ರಜೆ ಇತರೆ ನೆಪಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಕೂಲಿ ನಾಲಿ ಬಿಟ್ಟು ಕಚೇರಿಗೆ ಅಲೆದು ಸುಸ್ತಾಗಿ ಹೋಗಿದ್ದೇವೆ. ಯಾವೊಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರದ ಯೋಜನೆಯೊಂದು ಬಡವರ ಮನೆ ಬಾಗಿಲಿಗೆ ತಲುಪಿಸುತ್ತಿಲ್ಲ. ಕಚೇರಿಗೆ ಅಲೆದರು ಸೌಲಭ್ಯ ಕಲ್ಪಿಸದಿರುವ ಬಗ್ಗೆ ಚೌರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಗ್ರಾಮಸ್ಥರಾದ ವೆಂಕನಗೌಡ, ಮಹಿಬೂಬ, ಮೌಲಾಲಿ, ಗದ್ದೆಪ್ಪ, ಚಿದಾನಂದ, ಹನುಮಂತ, ನರಸಪ್ಪ, ಮಹ್ಮದಲಿ, ಅಂಬಮ್ಮ, ರೇಷ್ಮಾ, ನಾಗಮ್ಮ ಮತ್ತಿತರ ಫಲಾನುಭವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.