ADVERTISEMENT

ಕುಡಿಯುವ ನೀರಿನ ಸಮಸ್ಯೆ: ಪರಿಹಾರಕ್ಕೆ ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 9:05 IST
Last Updated 12 ಜನವರಿ 2012, 9:05 IST

ಮಾನ್ವಿ: ತಾಲ್ಲೂಕಿನ ಹಿರೇಬಾದರದಿನ್ನಿ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಂಡು ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಬಾಗಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬಾದರದಿನ್ನಿ ಗ್ರಾಮದಲ್ಲಿ ಕುಡಿಯುವ ನೀರು ಸಂಗ್ರಹಿಸಲು ಟ್ಯಾಂಕ್ ಇದೆ. ಆದರೆ ಕಳೆದ ನಾಲ್ಕು ತಿಂಗಳಿಂದ ಸೂಕ್ತ ಮೋಟಾರ್ ಹಾಗೂ ಪೈಪ್‌ಲೈನ್ ವ್ಯವಸ್ಥೆ ಇಲ್ಲದೆ ಟ್ಯಾಂಕಿಗೆ ನೀರು ಸರಬರಾಜು ಆಗುತ್ತಿಲ್ಲ. ಈ ಕುರಿತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ.

ಗ್ರಾಮದ ಜನತೆ ಕುಡಿಯುವ ನೀರಿಗಾಗಿ ಸುಮಾರು 2 ಕಿ.ಮೀ ದೂರದ ಕಾಲುವೆ ಮತ್ತು  ಸಮೀಪದ ಬತ್ತದ ಗದ್ದೆಗಳಲ್ಲಿ ಹರಿಯುವ ನೀರನ್ನು ಅವಲಂಬಿಸಿದ್ದಾರೆ. ಈ ನೀರು ಕಲುಷಿತವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಹಿರೇಬಾದರದಿನ್ನಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಕೂಡಲೇ ಸೂಕ್ತ ಕ್ರಮ ಕೈಗೊಂಡು ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಮಹಿಳಾ ಶೌಚಾಲಯ ನಿರ್ಮಿಸಬೇಕು. ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಪಾಟೀಲ್ ಗೂಳಿ, ಉಪಾಧ್ಯಕ್ಷ ರಾದ ಬಿ.ಸಂತೋಷ ಹೂಗಾರ ಹಾಗೂ ವೀರಭದ್ರಪ್ಪ ಆಲ್ದಾಳ, ಬಿಜೆಪಿ ಯುವ ಮುಖಂಡ ಬಸವರಾಜ ಸ್ವಾಮಿ ವಟಗಲ್, ಕರವೇ ಕವಿತಾಳ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ, ಪದಾಧಿಕಾರಿಗಳಾದ ಯಂಕಣ್ಣ ಹಾಗೂ  ಕೃಷ್ಣಪ್ಪ ದೇವದುರ್ಗ, ಗ್ರಾಮ ಪಂಚಾಯಿತಿ ಸದಸ್ಯರಾದ ಕರಿಯಪ್ಪ, ಪಾರ್ವತಮ್ಮ ತೋಟನಗೌಡ, ಶಾಂತಮ್ಮ  ಯಂಕಪ್ಪ ಹಾಗೂ  ಮಲ್ಲಯ್ಯ ಶಿವಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.