ADVERTISEMENT

ಕೈಕೊಟ್ಟ ಕನಕ ಹತ್ತಿ ತಳಿ: ರೈತ ಕಂಗಾಲುಪ್ರಜಾವಾಣಿ ವಾರ್ತೆ ಲಿಂಗಸುಗೂರು: ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಬಿತ್ತನೆ ಮಾಡಿರುವ (ಮೈಕೊ ಕಂಪೆನಿ ಕನಕ ಬಿಟಿ) ಹತ್ತಿ ತಳಿ ಅಬ್ಬರದಿಂದ ಬೆಳೆದು ನಿಂತಿದೆ. ಆದರೆ, ಕಾಯಿ ಕಟ್ಟಿಲ್ಲ ಎಂಬ ಚಿಂತಿ ಇದೀಗ ರೈತರನ್ನು ಆತಂಕಕ್ಕೆ ದೂಡಿದೆ. ಕಳೆದ ವರ್ಷ ಬಿಟಿ ಕನಕ ಹತ್ತಿ ತಳಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:21 IST
Last Updated 2 ಡಿಸೆಂಬರ್ 2013, 6:21 IST

ಲಿಂಗಸುಗೂರು: ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಬಿತ್ತನೆ ಮಾಡಿರುವ (ಮೈಕೊ ಕಂಪೆನಿ ಕನಕ ಬಿಟಿ) ಹತ್ತಿ ತಳಿ ಅಬ್ಬರದಿಂದ ಬೆಳೆದು ನಿಂತಿದೆ. ಆದರೆ, ಕಾಯಿ ಕಟ್ಟಿಲ್ಲ ಎಂಬ ಚಿಂತಿ ಇದೀಗ ರೈತರನ್ನು ಆತಂಕಕ್ಕೆ ದೂಡಿದೆ.

ಕಳೆದ ವರ್ಷ ಬಿಟಿ ಕನಕ ಹತ್ತಿ ತಳಿ ಬಂಪರ ಬೆಳೆ ಬಂದಿರುವ ಜಾಹೀರಾತು ನಂಬಿದ ರೈತರು, ತಾಲ್ಲೂಕಿನ ಭಾಗಶಃ ರೈತರು ಮೈಕೊ ಕಂಪೆನಿ ಕನಕ (ಬಿಟಿ) ಹತ್ತಿ ಬಿತ್ತನೆ ಮಾಡಿಕೊಂಡಿದ್ದಾರೆ. ಅಬ್ಬರದಿಂದ ಬೆಳೆದಾಗ ಖುಷಿ ಪಟ್ಟಿದ್ದ ರೈತರು ಗಿಡದಲ್ಲಿ 6–8ಕಾಯಿ ಮಾತ್ರ ಬಿಟ್ಟಿರುವುದು ಸಂಕಷ್ಟಕ್ಕಿ ಸಿಲುಕಿಸಿದೆ.

ತಾಲ್ಲೂಕಿನ ಯಲಗಲದಿನ್ನಿ, ಹೊನ್ನಳ್ಳಿ, ಯರಡೋಣಿ, ಫೂಲಭಾವಿ, ರಾಯದುರ್ಗ, ಆನೆಹೊಸೂರು ಸೇರಿದಂತೆ ನೂರಾರು ರೈತರು ಕನಕ (ಬಿಟಿ) ಹತ್ತಿ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಬೆಳೆದ ಬೆಳೆ ಕಂಡು ರೈತ ಸಮೂಹ ಖುಷಿಯಿತ್ತು. ಸಧ್ಯ ಗಿಡದಲ್ಲಿನ ನಾಲ್ಕಾರು ಕಾಯಿಯಲ್ಲಿ ಹತ್ತಿ ಬಿಡಿಸಲು ಮುಂದಾಗದೇ ಕಚೇರಿಗಳಿಗೆ ಅಲೆಯುತ್ತಿರುವುದು ಸಾಮಾನ್ಯ.

ಬಿತ್ತನೆ ಪೂರ್ವದಲ್ಲಿ ಮೈಕೊ ಕಂಪೆನಿಯವರು ಪ್ರತಿ ಎಕರೆಗೆ 10–15ಕ್ವಿಂಟಲ್‌ ಇಳುವರಿ ಪಡೆಯಬಹುದು ಎಂದು ಹೇಳಿದ್ದರು. ಪ್ರತಿ ಎಕರೆಗೆ ಅಂದಾಜು ₨ 18–20ಸಾವಿರ ಹಣ ಖರ್ಚು ಮಾಡಿ ಬಿತ್ತನೆ ಮಾಡಿಕೊಂಡಿದ್ದು ಖರ್ಚು ಮಾಡಿದ ಹಣದಷ್ಟು ಹತ್ತಿ ಫಸಲು ಬರುವುದಿಲ್ಲ ಎಂದು ಚೆನ್ನಗದ್ದಿ ಅಳಲು ತೋಡಿಕೊಂಡಿದ್ದಾರೆ.

ಕಂಪೆನಿ ಹೇಳಿದ್ದ ನೋಡಿದ್ರೆ ನಮ್ಮ ಹೊಲ್ದಾಗಿನ ಹತ್ತಿ ಗಿಡದಾಗ 80–90 ಕಾಯಿಗಳಿರಬೇಕು. ಆದರೆ, ಒಂದು ಗಿಡದಲ್ಲಿ 6–8 ಇದ್ದರೆ ಇನ್ನೊಂದು ಗಿಡದಲ್ಲಿ 8–10 ಹೀಗೆ ಕಾಯಿ ಬಿಟ್ಟಿವೆ. ಹತ್ತಿ ಗಿಡ ಮಾತ್ರ ತಲೆ ಎತ್ತರ ಬೆಳೆದು ನಿಂತಿವೆ ಎಂದು ಕಮಲಮ್ಮ ಹೊನ್ನಳ್ಳಿ ಹಿಡಿಶಾಪ ಹಾಕಿದರು.

ಕೃಷಿ ಇಲಾಖೆಗೆ ದೂರು: ತಾಲ್ಲೂಕಿನ ಹೊನ್ನಳ್ಳಿ, ಯರಡೋಣ, ಕರಡಕಲ್ಲ, ಯಲಗಲದಿನ್ನಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಮೈಕೊ ಕಂಪೆನಿ ಕನಕ (ಬಿಟಿ) ಹತ್ತಿ ವೈಫಲ್ಯ ಕುರಿತು ರೈತರಾದ ನೀಲಮ್ಮ ಅಯ್ಯನಗೌಡ, ಸಿದ್ಧಲಿಂಗಪ್ಪ ವೀರನಗೌಡ, ಕಮಲಮ್ಮ ಬನ್ನಿಗೋಳ, ಚೆನ್ನಪ್ಪ ಗದ್ದಿ, ಬಸನಗೌಡ ಕರಡಕಲ್ಲ ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ:  ಮೈಕೊ ಕಂಪೆನಿಯ ಕನಕ(ಬಿಟಿ) ಮತ್ತು ಇನ್ನೂ ಕೆಲ ತಳಿಯ ಹತ್ತಿ ಬಿತ್ತನೆ ಮಾಡಿಕೊಂಡ ರೈತರು ಕೈ ಸುಟ್ಟುಕೊಂಡಿದ್ದಾರೆ. ಕಂಪೆನಿ ಮತ್ತು ವ್ಯಾಪಾರಸ್ಥರು ರೈತರಿಗೆ ಹೆಚ್ಚಿನ ಇಳುವರಿ ಆಸೆ ತೋರಿಸಿ ವಂಚನೆ ಮಾಡಿದ್ದಾರೆ. ಕೂಡಲೆ ಕೃಷಿ ಇಲಾಖೆ ಮಧ್ಯಸ್ಥಿಕೆ ವಹಿಸಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.