ADVERTISEMENT

ಕ್ರಿಯಾ ಯೋಜನೆಯಲ್ಲಿ ಗೋಲ್‌ಮಾಲ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 12:20 IST
Last Updated 9 ಫೆಬ್ರುವರಿ 2011, 12:20 IST

ಲಿಂಗಸುಗೂರ:  ತಾಲ್ಲೂಕಿನಾದ್ಯಂತ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಭ್ರಷ್ಟಾಚಾರದ ಮೂಲ ಕೇಂದ್ರವಾಗಿ ಹೊರ ಹೊಮ್ಮುತ್ತಿರುವುದು ಬಹಿರಂಗ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈಗಾಗಲೆ ದಾಖಲೆ ಸಮೇತ ನೂರಾರು ಪ್ರಕರಣಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಎಷ್ಟೆಲ್ಲಾ ಅವಘಡಗಳು ನಡೆದರೂ ಕ್ರಮ ಜರುಗದೆ ಹೋಗಿರುವುದು ಮತ್ತಷ್ಟು ದುರಾಡಳಿತಕ್ಕೆ ಮಣೆ ಹಾಕಿದಂತಾಗಿದೆ.

ದೇವರಭೂಪೂರ, ರೋಡಲಬಂಡ(ಯುಕೆಪಿ), ನಾಗಲಾಪುರ, ಮಟ್ಟೂರು, ಸಂತೆಕೆಲ್ಲೂರು, ಗೆಜ್ಜಲಗಟ್ಟಾ, ಗೌಡೂರು, ಆಮದಿಹಾಳ, ಉಪ್ಪಾರನಂದಿಹಾಳ ಮತ್ತಿತರ ಗ್ರಾಪ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ದಾಖಲಾಗಿವೆ. ಇಂತಹ ಪ್ರಕರಣಕ್ಕೆ ಸಂಬಂಧಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳೆ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ವರದಿ ನೀಡಿದ್ದರು ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಎಲ್ಲಾ ಆರೋಪಗಳ ಬೆನ್ನ ಹಿಂದೆಯೆ ಆನ್ವರಿ ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರ ಕಣ್ಣಿಗೆ ಮಣ್ಣೆರಚಿ ಲಕ್ಷಾಂತರ ಹಣ ಗುಳುಂ ಮಾಡಿರುವ ಪ್ರಕರಣವೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ ಬಹಿರಂಗಗೊಂಡಿದೆ. ಶಾಂತಪ್ಪ ಸೋಮನಮರಡಿ ಎಂಬುವವರು ನಾಲ್ಕು ತಿಂಗಳ ಹಿಂದೆ 25 ಕೂಲಿಕಾರರ ಹೆಸರು ನೊಂದಾಯಿಸಿದ್ದಾರೆ. ಅವರಿಗೆ ಜಾಬ್ ಕಾರ್ಡ್ ಪೂರೈಸಿಲ್ಲ. ಅಲ್ಲದೆ, ಇಂದಿಗೂ ಕೂಲಿ ಕೆಲಸ ನೀಡದೆ ಹೋದಾಗ ಕಾನೂನಾತ್ಮಕ ಹೋರಾಟ ಆರಂಭಿಸಿದ್ದಾರೆ.

ಲಾಲಬಿ ಎಂಬುವವರು ಅಧ್ಯಕ್ಷರಾಗಿದ್ದಾಗ 2010-11ನೇ ಸಾಲಿನಗಾಗಿ ರೂ. 1.28ಕೋಟಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಆನ್ವರಿ ಗ್ರಾಪಂ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಕೆಲವೆ ತಿಂಗಳಲ್ಲಿ ದುರುಗಮ್ಮ ಎಂಬುವವರು ನೂತನ ಆಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಪುನಃ ಇದೆ ಅವಧಿಗೆ ರೂ. 1.30ಕೋಟಿ ಹಣದ ಕ್ರಿಯಾಯೋಜನೆ ಸಿದ್ಧಪಡಿಸಿ ಹಟ್ಟಿ ಗ್ರಾಪಂ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಮಾನ್ಯ ಮಾಹಿತಿ ನೀಡಿದಾಗ ಹಟ್ಟಿ ಗ್ರಾಪಂದಲ್ಲಿ ಅನುಮೋದಿಸಿದ ಕ್ರಿಯಾಯೋಜನೆ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಜಿಪಂ ಉಪಕಾರ್ಯದರ್ಶಿಗಳಿಗೆ ದೂರು ನೀಡಿದ ನಂತರದಲ್ಲಿ ಆನ್ವರಿ ಗ್ರಾಪಂದಲ್ಲಿ ಅನುಮೋದನೆ ಪಡೆದುಕೊಂಡಿರುವ ಕ್ರಿಯಾ ಯೋಜನೆ ನಕಲು ನೀಡಿದ್ದಾರೆ. ಎರಡು ಕ್ರಿಯಾಯೋಜನೆಗಳಿಂದ ಸಾಮಾನ್ಯ ಜನತೆಗೆ ಕಿಂಚಿತ್ತು ಕೂಲಿ ಕೆಲಸ ದೊರಕುತ್ತಿಲ್ಲ. ಉದ್ಯೋಗ ಖಾತ್ರಿ ಹೆಸರಿನಲ್ಲಿ ಹಣ ಗುಳುಂ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಜಾಬ್ ಕಾರ್ಡ್‌ಗಳನ್ನು ಗುತ್ತಿಗೆದಾರರಿಗೆ ನೀಡಿ ಕೂಲಿಕಾರರಿಗೆ ವಂಚಿಸಿದ್ದಾರೆ. ಕಳಪೆ ಕಾಮಗಾರಿ ಮಾಹಿತಿಗೆ ತಂದರು ಪರಿಶೀಲಿಸದೆ ಹಣ ಪಾವತಿಸುತ್ತಿದ್ದಾರೆ. ಒಂದೆ ಅವಧಿಗೆ ಎರಡು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಆನ್ವರಿ ಗ್ರಾಪಂಗೆ ಸಂಬಂಧಿಸಿದ ಕ್ರಿಯಾಯೋಜನೆಯಲ್ಲಿ ಒಂದನ್ನು ಹಟ್ಟಿ ಮತ್ತು ಇನ್ನೊಂದನ್ನು ಆನ್ವರಿ ಗ್ರಾಪಂ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದಾರೆ.

ಮಾಹಿತಿ ಫಲಕಗಳಲ್ಲಿ ತಪ್ಪು ಮಾಹಿತಿ ನಮೂದಿಸಿ ಜನತೆ ದಾರಿ ತಪ್ಪಿಸುವ ಯತ್ನ ಸೇರಿದಂತೆ ವಿವಿಧ ಆರೋಪಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಾಂತಪ್ಪ ಆಗ್ರಹಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.