ADVERTISEMENT

ಗುಡಿಹಾಳ ಕೆರೆ: ಪೈಪ್‌ಲೈನ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 9:45 IST
Last Updated 17 ಜೂನ್ 2011, 9:45 IST

ಕವಿತಾಳ: ಸಮೀಪದ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಗುಡಿಹಾಳ ಗ್ರಾಮದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಕೆರೆಗೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಿರಿಲಿಂಗಪ್ಪ ಮತ್ತು ಕಾಂಗ್ರೆಸ್ ಮುಖಂಡ ಬಾಬುಗೌಡ ಬುಧವಾರ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಿಲಿಂಗಪ್ಪ ಮಾಜಿ ಶಾಸಕ ಎನ್.ಎಸ್.ಬೋಸರಾಜು ಅವಧಿಯಲ್ಲಿ ನಿರ್ಮಿಸಲಾಗಿದೆ ಎನ್ನುವ ಒಂದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಕೆರೆಗೆ ಪೈಪ್‌ಲೈನ್ ಅಳವಡಿಸಲು ಮಸ್ಕಿ ಕ್ಷೇತ್ರದ ಶಾಸಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರವಾಗಿರುವುದನ್ನು ಮನಗಂಡು ಅಂದಿನ ಶಾಸಕರು 9ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು ರೂ.30 ಲಕ್ಷದಲ್ಲಿ ಕೆರೆ ನಿರ್ಮಿಸಿದ್ದರು.
 
ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಗುಡಿಹಾಳ ಗ್ರಾಮ ಮಸ್ಕಿ ಕ್ಷೇತ್ರದ ವ್ಯಾಪ್ಯಿಯಲ್ಲಿದೆ ಅಲ್ಲಿನ ಬಿಜೆಪಿ ಶಾಸಕರು ಅನಗತ್ಯವಾಗಿ ಹೊಸ ಕೆರೆ ನಿರ್ಮಾಣದ ಮಾತನ್ನಾಡುತ್ತಿದ್ದಾರೆ ಹೊರತು ಸದ್ರಿ ಕೆರೆಗೆ ಪೈಪ್‌ಲೈನ್ ಅಳವಡಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಬುಗೌಡ ಇಲಾಲಪುರ ಹೇಳಿದರು.

ಇದೇ ಕೆರೆ ಅಭಿವೃದ್ದಿ ಪಡಿಸಬೇಕು ಎಂದು ಒತ್ತಾಯಿಸಿದ ಮುಖಂಡರು ಹೊಸ ಕೆರೆ ನಿರ್ಮಿಸಲು ಮುಂದಾದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ರಾಮಣ್ಣ, ಚಂದ್ರಶೇಖರ, ಹನುಮಂತ, ನಾಗಪ್ಪ, ಅಮರೇಶ ವಂದ್ಲಿ, ದೇವರಾಜ ಹಡಪದ, ಗುಂಡಪ್ಪ ಮತ್ತು ಚಂದಪ್ಪ ಬಡಿಗೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.