ADVERTISEMENT

ಗ್ರಾಮ ಅಭಿವೃದ್ಧಿಗೆ ಗಣಿ ಆಡಳಿತದಿಂದ 10 ಕೋಟಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 6:10 IST
Last Updated 6 ಜನವರಿ 2012, 6:10 IST

ಹಟ್ಟಿ ಚಿನ್ನದ ಗಣಿ: ಹಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಚಿನ್ನದ ಗಣಿ ಆಡಳಿತಕ್ಕೆ 10 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶಿಸುವುದಾಗಿ ಮುಖ್ಯಮಂತ್ರಿ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಶಾಸಕ ಮಾನಪ್ಪ ವಜ್ಜಲ ತಿಳಿಸಿದರು.

ಹಟ್ಟಿ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕೈಗೊಳ್ಳುವ ಸಮುದಾಯ ಭವನದ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಹಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಗಣಿ ಆಡಳಿತದಿಂದ ಅನುದಾನ ನೀಡಲು ಆದೇಶಿಸುವಂತೆ ಕೋರಿಕೊಂಡಾಗ ಅವರು ಅತೀ ಶೀಘ್ರದಲ್ಲಿ ಆದೇಶ ಹೊರಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು. ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗಾಗಿ ದುಡಿಯುವಂತೆ ಸಲಹೆ ನೀಡಿದರು.

ಸಮುದಾಯ ಭವನವನ್ನು ಶಾಲಾ ಆವರಣದಲ್ಲಿ ನಿರ್ಮಾಣದಿಂದ ಸರ್ಕಾರಿ ಉರ್ದು ಶಾಲಾ ಮಕ್ಕಳು ಆಟದ ಮೈದಾನ ಇಲ್ಲದಂತಾಗುತ್ತದೆ. ಸಮುದಾಯ ಭವನ ಬೇರೆ ಕಡೆ ನಿರ್ಮಿಸುವಂತೆ ಜನರು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದಕ್ಕೆ ಪರಿಹರಿಸಲು ಮೊದಲ ಆದ್ಯತೆ ನೀಡಬೇಕು. ಗ್ರಾಮ ಪಂಚಾಯಿತಿ ಆಡಳಿತ ಗಮನ ಹರಿಸುತ್ತಿಲ್ಲ ಎಂದು ನೆರೆದಿದ್ದ ಗ್ರಾಮದ ಜನತೆ ಶಾಸಕರ ಮುಂದೆ ತಮ್ಮಅಳಲನ್ನು ತೋಡಿಕೊಂಡರು.

ಗ್ರಾಮ ಪಂಚಾಯತಿ ಅಧ್ಯಕ್ಷ ಜಿ. ಶ್ರೀನಿವಾಸ, ಉಪಾಧ್ಯಕ್ಷೆ ಶಾರದಾ ಉಮಾಪತಿ ಪಾಟೀಲ್, ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ಆನ್ವರಿ, ಸದಸ್ಯರಾದ ಶಂಕರಗೌಡ, ಶರಣಗೌಡ, ಬಂದೇನವಾಜ, ಸಿರಾಜುದ್ದೀನ್, ರಂಗನಾಥ, ಶ್ರೀನಿವಾಸ, ಸರಸ್ವತಿ, ಗ್ರಾಮದ ಗಣ್ಯರಾದ ಗುಂಡಪ್ಪ ಗೌಡ ಹಾಗೂ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.