ADVERTISEMENT

ಜಮಾತೆ ಇಸ್ಲಾಮಿ ಹಿಂದ್: ಮಹಿಳಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:25 IST
Last Updated 20 ಜನವರಿ 2011, 8:25 IST

ರಾಯಚೂರು:  ‘ಕುಟುಂಬ ಹಾಗೂ ಸಮಾಜದ ಪುನರ್ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯ ಕುರಿತ ವಿಚಾರ ಗೋಷ್ಠಿಯನ್ನು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಮಹಿಳಾ ಘಟಕವು ಈಚೆಗೆ ಹಮ್ಮಿಕೊಂಡಿತ್ತು. ಜಿಲ್ಲಾ ಮಹಿಳಾ  ಸಮ್ಮೇಳನದ ಅಂಗವಾಗಿ ಈ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹೆರಾ ಫಾರೂಖ್ ಮಾತನಾಡಿ, ಕುರಾನ್ ಮತ್ತು ಪ್ರವಾದಿ ವಚನಗಳ ಬೆಳಕಿನಲ್ಲಿ  ಮಹಿಳೆಯ ಸ್ಥಾನಮಾನ ಹಾಗೂ ಅವರ ಜವಾಬ್ದಾರಿ ಕುರಿತು ವಿವರಿಸಿದರು. ಕುಟುಂಬ, ಸಮಾಜ ಮುನ್ನಡೆಸುವಲ್ಲಿ ಮಹಿಳೆ ಮಹತ್ವದ ಪಾತ್ರ ನಿರ್ವಹಿಸುತ್ತಾಳೆ ಎಂದರು.

ಮತ್ತೊಬ್ಬ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕಿ ಡಾ.ರಾಜಶ್ರೀ ಕಲ್ಲೂರ್‌ಕರ್ ಅವರು, ಸಮಾಜದಲ್ಲಿ ಮಹಿಳೆಯರು ಮುನ್ನಡೆ ಸಾಧಿಸಿದ್ದಾರೆ. ಕುಟುಂಬ ಕಲಹಗಳು ಈಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಕಿರುತೆರೆ ಧಾರಾವಾಹಿ ಪ್ರಭಾವ  ಕಾರಣ ಎಂದರು.

ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಜಾಗೃತಿ ದೇಶಮಾನೆ ಮಾತನಾಡಿ, ಮಹಿಳೆಯು ಮಗುವಿಗೆ ಮಡಿಲಿನಿಂದಲೇ ವಿದ್ಯೆಯನ್ನು ಕಲಿಸುತ್ತಾಳೆ. ಹೀಗಾಗಿ ತಾಯಿಯ ಮಡಿಲೇ ಮೊದಲ ಪಾಠ ಶಾಲೆಯಾಗಿದೆ. ಜವಾಬ್ದಾರಿಯಿಂದ ಮಕ್ಕಳ ಪೋಷಣೆ ಮಾಡಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ನೂರ್‌ಜಹಾನ್ ಅವರು, ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಹೋರಾಟ ಮನೋಭಾವ ರೂಢಿಸಿಕೊಂಡು ಏಳ್ಗೆ ಹೊಂದಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಮ್ಮೆ ತುರ್ರಜಾಕ್ ವಹಿಸಿದ್ದರು. ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಶಮೀ ಮುನ್ನಿಸಾ ಕೆ.ಹುಸೇನಿ ನಿರೂಪಿಸಿದರು. ಸಂಚಾಲಕಿ ರೇಹಾನ ಪರ್ವಿನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.