ADVERTISEMENT

ಜಾಲಹಳ್ಳಿ: ಪರಿಹಾರ ಕಾಣದ ನೀರಿನ ಸಮಸ್ಯೆ

ಫ್ಲೋರೈಡ್‌ ನೀರು ಕುಡಿದು ಹಲವರಿಗೆ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:03 IST
Last Updated 28 ಏಪ್ರಿಲ್ 2018, 13:03 IST
ಜಾಲಹಳ್ಳಿ ಸಮೀಪದ ಕೃಷ್ಣಾ ನದಿ ಪಕ್ಕದಲ್ಲಿರುವ ನೀರು ಶುದ್ಧೀಕರಣ ಘಟಕ
ಜಾಲಹಳ್ಳಿ ಸಮೀಪದ ಕೃಷ್ಣಾ ನದಿ ಪಕ್ಕದಲ್ಲಿರುವ ನೀರು ಶುದ್ಧೀಕರಣ ಘಟಕ   

ಜಾಲಹಳ್ಳಿ: ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಕೃಷ್ಣಾ ನದಿಯಿಂದ 2007–08ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ಶುದ್ದ ಕುಡಿಯುವ ನೀರಿನ ಯೋಜನೆಯಡಿ ₹3.56 ಕೋಟಿ ವೆಚ್ಚದಲ್ಲಿ ಕೈಗೆತ್ತಿಗೊಂಡ ಕಾಮಗಾರಿ ಪೂರ್ಣಗೊಂಡು 10 ವರ್ಷಗಳಾಗಿವೆ. ಆದರೆ ಈವರೆಗೆ ಒಂದು ಹನಿ ನೀರು ಪಟ್ಟಣದ ಜನ ಕುಡಿದಿಲ್ಲ. ಬೇಸಿಗೆ ಇರುವ ಕಾರಣ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಪರದಾಡುವಂತಾಗಿದೆ.

25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಲಹಳ್ಳಿ ವ್ಯಾಪ್ತಿಯಲ್ಲಿ 9 ವಾರ್ಡ್‌ ಸೇರಿ 33 ಜನ ಗ್ರಾಮ ಪಂಚಾಯಿತಿ ಸದಸ್ಯರು, ಒಬ್ಬ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಇದ್ದಾರೆ.

‘ಕುಡಿವ ನೀರಿನಲ್ಲಿ ಪ್ಲೋರೈಡ್‌ ಅಂಶ ಹೆಚ್ಚಿರುವ ಕಾರಣ ಬಹುತೇಕ ಮಂದಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬೆನ್ನು ನೋವು, ಕೈ, ಕಾಲು ನೋವು, ಹಲ್ಲು ಕಂದು ಬಣ್ಣಕ್ಕೆ ಬರುವುದು ಮುಂತಾದ ಸಮಸ್ಯೆಗಳು ಮಕ್ಕಳಿಗೆ ಮತ್ತು ಹಿರಿಯರಿಗೆ ಕಾಡುತ್ತಿದೆ. ಆದರೆ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

ADVERTISEMENT

‘ಈ ಯೋಜನೆ ಸರಿಪಡಿಸಿ ನೀರು ಸರಬರಾಜು ಮಾಡಲು ಪ್ರಗತಿಪರ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ರೀತಿಯಲ್ಲೂ ಪ್ರಯೋಜನ ಆಗಲಿಲ್ಲ. ₹50 ಲಕ್ಷ ಮಂಜೂರುಗೊಳಿಸಿ  ಓವರ್‌ಹೇಡ್‌ ಟ್ಯಾಂಕ್‌ ನಿರ್ಮಿಸಲಾಯಿತಾದರೂ ಜನರಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಲಿಲ್ಲ’  ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈ ಯೋಜನೆ ಸಂಪೂರ್ಣವಾಗಿ ಕಳಪೆಯಾಗಿದ್ದು, ಯಾವುದೇ ಕಾರಣಕ್ಕೂ ನೀರು ಹರಿಸಲು ಸಾಧ್ಯವಿಲ್ಲ ಎಂಬ ಅಂಶ ಬೆಳಕಿಗೆ ಬಂದಾಗ, ತಕ್ಷಣವೇ ಬಸಲಿಂಗಪ್ಪನ ಭಾವಿ ಹತ್ತಿರ ₹20 ಲಕ್ಷ ವೆಚ್ಚದಲ್ಲಿ ಆರ್‌.ಓ ಪ್ಲಾಂಟ್, ಸಹಕಾರ ಸಂಘದ ಬ್ಯಾಂಕ್‌ನಲ್ಲಿ ₹5 ಲಕ್ಷ ವೆಚ್ಚದಲ್ಲಿ ಆರ್‌.ಓ ಪ್ಲಾಂಟ್ ನಿರ್ಮಿಸಲಾಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಲಿಲ್ಲ’ ಎಂದು ತಿಳಿಸಿದರು.

‘2011–12 ರಲ್ಲಿ ಅಮರಪುರ ಕ್ರಾಸ್‌ ಬಳಿ ಜಲ ನಿರ್ಮಾಲ ಯೋಜನೆಯಡಿ ₹12 ಕೋಟಿ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ನೀರು ಹರಿಸಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪೂರ್ಣಗೊಂಡು

5 ವರ್ಷಗಳಾಗಿವೆ. ಆದರೆ ನೀರು ಪೂರೈಕೆಯಾಗಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು’ ಎಂದು ಎಂದು ವಿಧ್ಯಾರ್ಥಿ ಸಂಘಟನೆಯ ಮುಖಂಡ ಅಮರೇಶ ನಾಯಕ ತಿಳಿಸಿದರು.

**
ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು. ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು
– ಶಿವರಾಜ ನಾಯಕ, ಸ್ಥಳೀಯರು

**

ಅಲಿಬಾಬಾ ಪಟೇಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.