ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆ 55ನೇ ವಿತರಣಾ ನಾಲೆ ಮೇಲ್ಭಾಗದಲ್ಲಿ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ವಿರೋಧಿಸಿ ಉದ್ಬಾಳ, ಹುಲ್ಲೂರು, ದುರ್ಗಾಕ್ಯಾಂಪ್‌ಗಳ ರೈತರು ಶುಕ್ರವಾರ ತಹಶೀಲ್ದಾರ ವೆಂಕನಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ನಡುವೆ ವಿಷ ಕುಡಿಯಲು ಯತ್ನಿಸಿದ ರೈತನಿಂದ ಪೋಲಿಸರು ವಿಷದ ಬಾಟಲಿ ಕಸಿದುಕೊಂಡು ರಕ್ಷಣೆಗೆ ಮುಂದಾದ ಘಟನೆಯೂ ನಡೆಯಿತು.
ಮಸ್ಕಿ ಸಮೀಪದ 55ನೇ ವಿತರಣಾ ನಾಲೆ ವ್ಯಾಪ್ತಿಯಲ್ಲಿ ಅಕ್ರಮ ಪೈಪ್‌ಗಳ ತೆರವು ಜತೆಗೆ ಜೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದ ರೈತರ ಲಕ್ಷಾಂತರ ರೂಪಾಯಿ ಭತ್ತದ ಬೆಳೆಗೆ ನಷ್ಟವಾಗುತ್ತದೆ ಎಂದು ದುರ್ಗಾಕ್ಯಾಂಪ್ನ ರೈತರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ ವೆಂಕನಗೌಡ ಪಾಟೀಲ. ಜಲ ಸಂಪನ್ನೂಲ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತಪ್ಪ ಸೇರಿದಂತೆ ಹಲವು ಅಧಿಕಾರಿಗಳು ರೈತರ ಪ್ರತಿಭಟನೆ ಎದುರಿಸಬೇಕಾಯಿತು. ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಭತ್ತದ ಬೆಳೆ ಕೈಗೆ ಬಂದಿದೆ. ಇಂಥ ವೇಳೆಯಲ್ಲಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತ ಮಾಡಿದರೆ ನಮಗೆ ತೊಂದರೆಯಾಗುತ್ತದೆ. ಈ ಭಾಗದ ರೈತರ ಮೇಲೆ ಸಿಟ್ಟಿದ್ದರೆ ವಿಷ ಕೊಟ್ಟು ಬೀಡಿ, ಕುಡಿದು ಸಾಯುತ್ತೇವೆ ಎಂದು ಅನೇಕ ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.
55ನೇ ವಿತರಣಾ ನಾಲೆಯೊಂದನ್ನೇ ಗುರಿಮಾಡಿಕೊಂಡಿದ್ದೀರಿ, ಮುಖ್ಯ ಕಾಲುವೆಯಿಂದ ಹಿಡಿದು ಕೊನೆಯವರೆಗೆ ಅಕ್ರಮ ನೀರಾವರಿ ನಡೆಯುತ್ತಿದೆ. ಕೆಲವು ಪ್ರಭಾವಿಗಳು ಬಹಿರಂಗವಾಗಿ ಮುಖ್ಯಕಾಲುವೆಯಿಂದ ನೀರು ಪಡೆದು ಬೆಳೆ ಬೆಳೆಯುತ್ತಿದ್ದಾರೆ. ಅವರ ಮೇಲೆ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಂಧಾನ ಯತ್ನ: ಪ್ರತಿಭಟನೆ ನಡೆಸುತ್ತಿದ್ದ ರೈತರ ಸಂಧಾನಕ್ಕೆ ಮುಂದಾದ ಸಿಂಧನೂರು ತಹಶೀಲ್ದಾರ ವೆಂಕನಗೌಡ ಪಾಟೀಲ ನಾಲೆ ಕೆಳಭಾಗಕ್ಕೆ ನೀರು ಮುಟ್ಟುತ್ತಿಲ್ಲ ಎಂದು ಪ್ರತಿಭಟಿಸಿ ಆ ಭಾಗದ ರೈತರು ಕಳೆದ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಧರಣಿ ಸ್ಥಳಕ್ಕೆ ಮೇಲ್ಭಾಗದ ರೈತ ಮುಖಂಡರು ಬನ್ನಿ, ಇಬ್ಬರನ್ನೂ ಕೂಡಿಸಿ ನೀರು ಹಂಚಿಕೆಯಲ್ಲಿ ಸಂಧಾನ ಮಾಡೋಣ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಜಿಲ್ಲಾ ಪಂಚಾಯಿತಿ ಸದಸ್ಯ ದಯಾನಂದರಡ್ಡಿ ಪಾಟೀಲ, ವೆಂಕಣ್ಣ ಕಮತರ್, ಚಿಟ್ಟಿಬಾಬು, ಕಿಸಾನ್ ಸಂಘದ ಅಧ್ಯಕ್ಷ ಬಸನಗೌಡ ಮುದಬಾಳ ಸಿಪಿಐ ಗಳಾದ ಶೇಖರಪ್ಪ, ಎಂ.ಜಿ. ಸತ್ಯನಾರಾಯಣರಾವ್, ಜೆಸ್ಕಾಂ, ಜಲಸಂಪನ್ಮೂಲ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.