ADVERTISEMENT

ನವ ಮಂತ್ರಾಲಯ ನಿರ್ಮಾತೃ ಸುಯತೀಂದ್ರತೀರ್ಥರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:25 IST
Last Updated 22 ಮಾರ್ಚ್ 2014, 10:25 IST

ರಾಯಚೂರು: ನಡೆದಾಡುವ ರಾಯರು ಎಂದೇ ಭಕ್ತರಿಂದ ಕರೆಯಲ್ಪಟ್ಟವರು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ಹಿಂದಿನ ಪೀಠಾಧಿಪತಿ  ಸುಶಮೀಂದ್ರತೀರ್ಥರು. ಶುಕ್ರವಾರ ಹರಿಪಾದ ಸೇರಿದ ಶ್ರೀಮಠದ ಪೀಠಾಧಿಪತಿ ಸುಯ­ತೀಂದ್ರತೀರ್ಥ ಸ್ವಾಮೀಜಿಯವರನ್ನು ಭಕ್ತರು ಕರೆಯುತ್ತಿದ್ದುದು ನವ ಮಂತ್ರಾಲಯ ನಿರ್ಮಾತೃ!

ಹೌದು, 2009ರಲ್ಲಿ ಪ್ರವಾಹದ ಹೊಡೆತಕ್ಕೆ ಮಂತ್ರಾಲಯ ಕ್ಷೇತ್ರ ನಲುಗಿ ಹೋಗಿತ್ತು. ಮಂತ್ರಾಲಯ ಕ್ಷೇತ್ರವನ್ನು ಒಂದೇ ಹೊಡತಕ್ಕೆ ಪ್ರವಾಹ ಗೂಡಿಸಿ ಹಾಕಿತ್ತು.

ಎಲ್ಲೆಂದರಲ್ಲಿ ಪಾಳು ಬಿದ್ದ ದೃಶ್ಯಗಳೇ ಅನಾವರಣವಾಗುತ್ತಿದ್ದವು. ಭಕ್ತರು ಆತಂಕಕ್ಕೊಳಗಾದರು. ಆ ಆತಂಕ ದೂರ ಮಾಡಿದವರು ಪೀಠಾಧಿಪತಿ ಸುಯತೀಂದ್ರ ತೀರ್ಥರು.

ಅತ್ಯಂತ ಅಲ್ಪಾವಧಿಯಲ್ಲಿಯೇ ಕ್ಷೇತ್ರವನ್ನು ಅದ್ಭುತ ರೀತಿಯಲ್ಲಿ ಅಭಿವೃದ್ಧಿಗೊಳಿಸಿರುವುದು ಪ್ರತ್ಯಕ್ಷ ಸಾಕ್ಷಿ ಇನ್ನೂ ಕಾಣುತ್ತಿದೆ.
ಶ್ರೀಗಳು ಪಾದಯಾತ್ರೆ ಹೊರಟಾಗ ಪಾದ ಪೂಜೆಯಿಂದ ಸಂಗ್ರಹಗೊಂಡಿದ್ದು ₨ 8.25 ಕೋಟಿ! ಶ್ರೀಮಠದ ಮನವಿಗೆ ಕರ್ನಾಟಕ

ಸರ್ಕಾರ ₨ 10 ಕೋಟಿ ಮೊತ್ತದಲ್ಲಿ ಪುನರುತ್ಥಾನ ಕೆಲಸ ಕೈಗೊಂಡರು. ಭಕ್ತರು ಮತ್ತುದಾನಿಗಳ ನೆರವಿನಿಂದ ಶ್ರೀಮಠದ ಪ್ರಾಕಾರದ ಮುಖ್ಯದ್ವಾರ ₨ 8 ಕೋಟಿಯಲ್ಲಿ ನಿರ್ಮಾಣ, ₨ 2.3 ಕೋಟಿಯಲ್ಲಿ ನವರತ್ನ ಖಚಿತ ರಥ ನಿರ್ಮಾಣ, ₨1.2 ಕೋಟಿ ವೆಚ್ಚದಲ್ಲಿ ಬೆಳ್ಳಿ ಆನೆ, ₨ 75 ಲಕ್ಷ ವೆಚ್ಚದಲ್ಲಿ 2 ಕಲ್ಯಾಣ ಮಂಟಪ ನಿರ್ಮಾಣ, ₨ 68 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ, ₨ 25 ಲಕ್ಷ ವೆಚ್ಚದಲ್ಲಿ ಕೇಂದ್ರೀಯ ಸ್ವಾಗತ ಕಚೇರಿ ನವೀಕರಣ ಅಭಿವೃದ್ಧಿಗೆ ಇಂಬು ನೀಡಿದರು.

ಪೀಠಾಧಿಪತಿಗಳ ಪೂರ್ವಾಶ್ರಮದ ಪುತ್ರರು ಹಾಗೂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ವೆಂಕಟೇಶ, ಪುತ್ರಿ ಡಾ.ಸಿಂಧು ಜೋಶಿ ಅಂತಿಮ ದರ್ಶನ ಪಡೆದರು. ರಾಜಾ ಎಸ್ ರಾಜ­ಗೋಪಾಲಾಚಾರ್, ಆರ್ ಪ್ರಭಾ­ಕರರಾವ್,  ರಾಜಾ ಗಿರಿರಾ­ಜಾಚಾರ್, ಎಚ್.ಜಿ ರಾಮುಲು, ನಿವೃತ್ತ ನ್ಯಾಯಾಧೀಶ­ರಾದ ಗಣೇಶರಾವ್, ರಂಗನಗೌಡ ಹಾಗೂ ಅನೇಕ ಗಣ್ಯರು ಅಂತಿಮ ಗೌರವ ಸಮರ್ಪಿ­ಸಿದರು. ಕ್ಷೇತ್ರ ಶೋಕದಲ್ಲಿ ಆವರಿಸಿತ್ತು. ಸುದ್ದಿ ತಿಳಿದ ಭಕ್ತ ಸಮೂಹ ಕ್ಷೇತ್ರಕ್ಕೆ ಬಂದು ಪೀಠಾಧಿ­ಪತಿಗಳಿಗೆ ಗೌರವ ಸಮರ್ಪಿಸಿದರು.

‘ಪರಮ ಗುರುಗಳ ಮಾರ್ಗದಲ್ಲಿ ಮುನ್ನಡೆಯುವೆವು’

ರಾಯಚೂರು: ನಮ್ಮ ಪರಮ ಗುರುಗಳಾದ ಶ್ರೀ ಸುಯತೀಂದ್ರತೀರ್ಥ ಸ್ವಾಮೀಜಿಯವರು ತೋರಿರುವ ಮಾರ್ಗದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ನೂತನ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ನುಡಿದರು.

ಶುಕ್ರವಾರ ಶ್ರೀ ಸುಯತೀಂದ್ರತೀರ್ಥರು ಬೃಂದಾವನಸ್ಥರಾದ ಬಳಿಕ ಬೃಂದಾವನಕ್ಕೆ ಅಭಿಷೇಕ, ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

ನಮ್ಮ ಗುರುಗಳು ಪೀಠಾಧಿಪತಿಗಳಾದ ತಕ್ಷಣವೇ ಮಂತ್ರಾಲಯ ಅಭಿವೃದ್ಧಿ ಚಿಂತನೆ ಮಾಡಿ ಅಭಿವೃದ್ಧಿ ಪಡಿಸಿರುವುದು ಭಕ್ತ ಸಮೂಹಕ್ಕೆ ಕಾಣುತ್ತದೆ. ಅಭಿವೃದ್ಧಿ ಹರಿಕಾರರೆಂದೇ ಭಕ್ತ ಸಮೂಹದಿಂದ ಕರೆಯಲ್ಪಟ ಗುರುಗಳು. ಗುರುಗಳ ವಿದ್ವತ್, ಪಾಂಡಿತ್ಯವು ಕ್ಷೇತ್ರದ ಉನ್ನತಿಗೆ ಕಾರಣವಾಗಿದೆ. ಅಂಥ ಗುರುಗಳು ತಮಗೆ ಮಾರ್ಗ ತೋರಿದ್ದಾರೆ. ಆ ಮಾರ್ಗದಲ್ಲಿ ಮುನ್ನಡೆಯುವುದಾಗಿ ನುಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.