ADVERTISEMENT

ನಿರ್ವಹಣೆ ನಿರ್ಲಕ್ಷ್ಯ: ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 6:15 IST
Last Updated 11 ಏಪ್ರಿಲ್ 2012, 6:15 IST

ಲಿಂಗಸುಗೂರ: ತಾಲ್ಲೂಕಿನಾದ್ಯಂತ ಅಂತರ್ಜಲಮಟ್ಟ ಕುಸಿತದಿಂದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ತಲೆದೋರಿದೆ. ಆದರೆ, ಕಳ್ಳಿಲಿಂಗಸುಗೂರ ಗ್ರಾಮದಲ್ಲಿ ಅಂತರ್ಜಲದ ಕೊರತೆ ಇಲ್ಲ. ಗ್ರಾಮ ಪಂಚಾಯಿತಿ ನಿರ್ವಹಣೆ ಹಾಗೂ ಅಸಮರ್ಪಕ ವಿದ್ಯುತ್ ಸಂಪರ್ಕದಿಂದ ಕುಡಿಯುವ ನೀರಿನ ಸಮಸ್ಯೆಯಲ್ಲಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಅಮರೇಶ ಆರೋಪಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ತೆರೆದ ಬಾವಿಯ ಕಲುಷಿತ ನೀರನ್ನೆ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ತೆರೆದಬಾವಿಯ ಸುತ್ತಮುತ್ತ ನಿರ್ಮಿಸಿದ ಕಟ್ಟೆಯ ಮೇಲ್ಭಾಗದಲ್ಲಿಯೆ ಇಡೀ ಗ್ರಾಮಸ್ಥರು ಬಟ್ಟೆ ತೊಳೆಯುತ್ತಾರೆ.

ಬಟ್ಟೆ ತೊಳೆದ ನೀರು ಪುನಃ ಬಾವಿಗೆ ಸೇರ‌್ಪಡೆಗೊಳ್ಳುತ್ತಿದೆ. ಹೀಗಾಗಿ ಗ್ರಾಮಸ್ಥರು ಶುದ್ಧೀಕರಣಗೊಳ್ಳದ ನೀರನ್ನೆ ಅನಿವಾರ್ಯವಾಗಿ ಬಳಸುವಂತಾಗಿದೆ ಎಂದು ಹುಲಿಗೆಮ್ಮ ದೂರಿದ್ದಾರೆ.

ತೆರೆದಬಾವಿ ನೀರು ಹೇಗೇ ಇರಲಿ ಬಳಕೆಗೆ ಮತ್ತು ಕುಡಿಯಲು ಬಳಸುತ್ತಿದ್ದೇವೆ. ಆ ನೀರನ್ನು ಕೂಡ ನಿಗದಿತ ಅವಧಿಯಲ್ಲಿ ಬಿಡುತ್ತಿಲ್ಲ. ಬಟ್ಟೆತೊಳೆಯಲು ಪ್ರತ್ಯೇಕ ವ್ಯವಸ್ಥೆಗೆ ಸಾಕಷ್ಟುಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜೆಸ್ಕಾಂ ಅಧಿಕಾರಿಗಳು  ಸಮರ್ಪಕ ವಿದ್ಯುತ್ ಪೂರೈಸದೆ ಇರುವುದು ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.