ADVERTISEMENT

ನೀರಾವರಿಗೆ ದೇವೇಗೌಡರ ಕೊಡುಗೆ ಅಪಾರ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 13:42 IST
Last Updated 5 ಮೇ 2018, 13:42 IST

ದೇವದುರ್ಗ: ‘ನೂರಾರು ವರ್ಷದಿಂದ ನೀರಾವರಿಯಿಂದ ವಂಚಿತಗೊಂಡಿದ್ದ ಈ ಭಾಗದ ರೈತರ ಸಂಕಷ್ಟವನ್ನು ಅರಿತು ನನ್ನ ತಂದೆ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನೆಗುದಿಗೆ ಬಿದಿದ್ದ ನಾರಾಯಣಪುರ ಬಲದಂಡೆ ನಾಲೆ ಬೃಹತ್ ಯೋಜನೆಯನ್ನು ಜಾರಿ ಮಾಡಲಾಯಿತು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಶುಕ್ರವಾರ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ವೆಂಕಟೇಶ ಪೂಜಾರಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಈಗ ಇಲ್ಲಿನ ರೈತರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದು, ಇದರಲ್ಲಿ ಎಚ್‌.ಡಿ.ದೇವೇಗೌಡರ ಕೊಡುಗೆ ಇರುವುದನ್ನು ರೈತರು ಎಂದಿಗೂ ಮರೆಯಬಾರದು’ ಎಂದು ಹೇಳಿದರು.

‘ಎಚ್‌.ಡಿ.ದೇವೇಗೌಡ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಹಸಿರು ಕ್ರಾಂತಿ ಮಾಡಿದರು. ನೀರಾವರಿಯಿಂದ ವಂಚಿತಗೊಂಡಿದ್ದ ಲಕ್ಷಗಟ್ಟಲೆ ಹೇಕ್ಟರ್ ಪ್ರದೇಶಕ್ಕೆ ಬೃಹತ್ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ರೈತರ ನೆರವಾಗುವಂಥ ಕೆಲಸ ಮಾಡಿದರು. ರಾಷ್ಟ್ರೀಯ ಪಕ್ಷಗಳು ಕಾಲುವೆ ನಿರ್ಮಾಣಕ್ಕಾಗಿ ಕೇವಲ ಅಡಿಗಲ್ಲು ಹಾಕಿದವು. ನಂತರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ದೇವೇಗೌಡರು ಬರಬೇಕಾಯಿತು’ ಎಂದು ಅವರು ಹೇಳಿದರು.

ADVERTISEMENT

‘ದಶಕಗಳ ಕಾಲ ನನೆಗುದಿಗೆ ಬಿದಿದ್ದ ನೀರಾವರಿ ಯೋಜನೆಗಳನ್ನು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೆ ತರಲಾಯಿತು. ಆದರೆ ಕಾಂಗ್ರೆಸ್ ಸರ್ಕಾರದ ಐದು ವರ್ಷದ ಆಡಳಿತದಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸರ್ವಾಧಿಕಾರಿ ಧೋರಣೆಯಿಂದ ಇಡೀ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ’ ಎಂದು ಆಪಾದಿಸಿದರು.

‘ಜೆಡಿಎಸ್‌ ಅಧಿಕಾರಕ್ಕೆ ಬಂದ ಕೆಲವೆ ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ಜನರಿಗೆ ಸುಳ್ಳು ಹೇಳಿ ರಾಜಕೀಯ ಮಾಡುವಂಥ ಕುಟುಂಬ ನನ್ನದಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುವ ಮೂಲಕ ಜನರ ಕಷ್ಟ, ಸುಖಗಳಿಗೆ ಸ್ಪಂದಿಸಲಾಗುವುದು’ ಎಂದು ತಿಳಿಸಿದರು.

‘ಜೆಡಿಎಸ್ ಮತ್ತು ಬಿಜೆಪಿ ಒಳಪ್ಪಂದ ಎಂಬ ಕಾಂಗ್ರೆಸ್ ಪಕ್ಷದ ಆರೋಪ ಸತ್ಯಕ್ಕೆ ದೂರವಾಗಿದೆ. ನಮ್ಮ ಪಕ್ಷ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಅನುಮಾನ ಬೇಡ’ ಎಂದರು.

ವಿಧಾನ ಪರಿಷತ್ ಸದಸ್ಯ ಶರವಣ, ಸಿಂಧನೂರು ಕ್ಷೇತ್ರದ ಅಭ್ಯರ್ಥಿ ವೆಂಕಟರಾವ ನಾಡಗೌಡ, ಬಾಪುಗೌಡ ಪಾಟೀಲ ಚಿಕ್ಕಹೊನ್ನಕುಣಿ, ಚಂದ್ರಶೇಖರ ಪಾಟೀಲ ಜಾಗೀರ ಜಾಡಲದಿನ್ನಿ, ಅಶೋಕ ಕರಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.