ADVERTISEMENT

ಪ್ರತ್ಯೇಕ ರಾಜ್ಯ ರಚನೆ ಹೇಳಿಕೆಗೆ ಖಂಡನೆ/ಸಚಿವ ಕತ್ತಿ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:10 IST
Last Updated 20 ಅಕ್ಟೋಬರ್ 2012, 9:10 IST

ರಾಯಚೂರು: ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕೆ ಕಾಲ ಸನ್ನಿಹಿತವಾಗಿದ್ದು, ತಾವೇ ಈ ಹೋರಾಟದ ನೇತೃತ್ವವಹಿಸುವುದಾಗಿ ಹೇಳಿಕೆ ನೀಡಿ ನಾಡಿನ ಜನತೆಯ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡಿರುವ ರಾಜ್ಯ ಕೃಷಿ ಸಚಿವ ಉಮೇಶ ಕತ್ತಿ ಅವರ ಧೋರಣೆ ಖಂಡನೀಯ.

ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸಚಿವ ಉಮೇಶ ಕತ್ತಿ ಅವರ ಪ್ರತಿಕೃತಿ ದಹನ ಮಾಡಿದ ಕರವೇ ಕಾರ್ಯಕರ್ತರು ಕತ್ತಿ ಹೇಳಿಕೆ ಅತ್ಯಂತ ಬಾಲಿಶತನದಿಂದ ಕೂಡಿದೆ. ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆಸಿ ಎಷ್ಟೋ ಮಹಾತ್ಮರು  ತ್ಯಾಗ, ಬಲಿದಾನ ಮಾಡಿದ್ದಾರೆ.

ಸಂಸ್ಕೃತಿ, ಸಂಸ್ಕಾರ ಇಲ್ಲದ ದುರಹಂಕಾರಿ ಸಚಿವ ಉಮೇಶ ಕತ್ತಿ ಅವರು ಏಕೀಕರಣ ಇತಿಹಾಸವೇ ಗೊತ್ತಿಲ್ಲದಂಥ ವರ್ತಿಸಿದ್ದಾರೆ.  ಸಲ್ಲದ ಈ ರೀತಿ ಹೇಳಿಕೆ ನೀಡಿ  ಮುಗ್ದ ಜನತೆಯ ಭಾವನೆಯನ್ನು ವಿಷ ಬೀಜ ಬಿತ್ತುವ ಹುನ್ನಾರ ನಡೆಸಿದ್ದಾರೆ. ಇಂಥ ಸಚಿವರ ಅರ್ಥವಿಲ್ಲದ ಮಾತಿಗೆ ನಾಡಿನ ಜನತೆ ಕಿವಿಗೊಡಬಾರದು ಎಂದು    ಹೇಳಿದರು.

ಕೂಡಲೇ ಸಚಿವ ಕತ್ತಿ ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ರಾಜ್ಯದ ಜನತೆಯ ಕ್ಷಮೆ ಕೋರಬೇಕು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸಚಿವ ಸಂಪುಟದಿಂದ ಕತ್ತಿಯವರನ್ನು ಕೈ ಬಿಡಬೇಕು, ಶಾಸಕತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಹಾನಗಲ್, ಅಶೋಕ ಲೋಧಾ, ಶಾಂತಕುಮಾರ, ಸುರೇಶಸಿಂಗ್, ಶರಣಪ್ಪ, ಚಾಂದಪಾಷಾ, ಶೇಖಬಾಬಾ, ಮಹಾಂತೇಶ ರಾಜಲಬಂಡಾ, ಮಲ್ಲಿಕ್, ಅಮೀರ್, ಶಫಿ, ವಿರೇಶರೆಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.