ADVERTISEMENT

ಬಡವರ ಏಳ್ಗೆಯೇ ಡಾ.ಬಾಬೂಜಿಯ ಕಳಕಳಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 6:55 IST
Last Updated 6 ಏಪ್ರಿಲ್ 2011, 6:55 IST
ಬಡವರ ಏಳ್ಗೆಯೇ ಡಾ.ಬಾಬೂಜಿಯ ಕಳಕಳಿ
ಬಡವರ ಏಳ್ಗೆಯೇ ಡಾ.ಬಾಬೂಜಿಯ ಕಳಕಳಿ   

ರಾಯಚೂರು: ದೇಶದ ಏಳ್ಗೆ ಹಾಗೂ ಈ ದೇಶದ ಬಡವರ ಕಷ್ಟ ದೂರವಾಗಿಸುವ, ಅವರ ಸಮಸ್ಯೆಗೆ ಸ್ಪಂದಿಸುವ ಆಡಳಿತ ರೂಪಿಸುವುದು ಬಾಬು ಜಗಜೀವನರಾಮ್ ಅವರ ಕನಸಾಗಿತ್ತು. ಅವರು ತೋರಿದ ಮಾರ್ಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಅವರ ಕನಸು ನನಸಾಗಿಸುವ ಪ್ರಯತ್ನ ಆಗಬೇಕು ಎಂದು ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆ ಸಮಿತಿ ನೇತೃತ್ವದಲ್ಲಿ ಏರ್ಪಡಿಸಿದ್ಧ ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಲಿತರು, ಗ್ರಾಮೀಣರು, ರೈತರು ಮತ್ತು ಬಡವರ ಏಳ್ಗೆಯ ಬಗ್ಗೆ ಬಾಬೂಜಿ ಅವರು ಅಪಾರ ಕಳಕಳಿ ಹೊಂದಿದ್ದರು. ಈ ರೀತಿ ಅವರ ಜನ್ಮದಿನಾಚರಣೆ ಮಾಡುವುದರೊಂದಿಗೆ ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆ ಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ಮಾಡಿದ ಬೆಂಗಳೂರಿನ ಪತ್ರಕರ್ತ ಮತ್ತು ವಕೀಲರಾದ ಎಂ ಗಂಗಾಧರ್ ಅವರು, ಡಾ.ಜಗಜೀವನರಾಮ್ ಅವರು ಈ ದೇಶದ ಪ್ರಧಾನ ಮಂತ್ರಿ ಆಗಿದ್ದರೆ ದಲಿತರು ಈ ದೇಶದಲ್ಲಿ ಎತ್ತರದಲ್ಲಿ ಇರುತ್ತಿದ್ದರು. ಅವರನ್ನು ಆ ಸ್ಥಾನದಲ್ಲಿ ನೋಡಲು ಆಗಲಿಲ್ಲ ಎಂದು ವಿಷಾದಿಸಿದರು.

ಡಾ. ಅಂಬೇಡ್ಕರ್, ಡಾ ಜಗಜೀವನರಾಮ್ ಅವರು ದಲಿತರ ಸಂಕಷ್ಟ, ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದವರು. ಆದಾಗ್ಯೂ ಈ ಇಬ್ಬರನ್ನೂ ಸಾಕಷ್ಟು ಅಂತರದಲ್ಲಿ ನೋಡಿಕೊಂಡು ಬರುತ್ತಿರುವುದು ಸಮಂಜ ಸವಲ್ಲ. ದಲಿತರು, ಬಡವರ ಪರ ರೂಪಿಸಿದ ಯೋಜನೆ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಲುಪಿ ಸುವ ಕಾರ್ಯ ಆಗುತ್ತಿಲ್ಲ ಎಂದು ಹೇಳಿದರು.

ಮತ್ತೋರ್ವ ಉಪನ್ಯಾಸಕರಾದ ಚನ್ನ ಬಸಯ್ಯ ಹಿರೇಮಠ ಅವರು, ಡಾ.ಬಾಬೂಜಿ ಅವರದು ಮೇರು ವ್ಯಕ್ತಿತ್ವ. ದಲಿತರು ಮತ್ತು ಬಡವರ ಏಳ್ಗೆ, ಜಾತಿರಹಿತ ಸಮಾಜ ನಿರ್ಮಾಣ ಅವರ ಕನಸಾಗಿತ್ತು. ಅವರು ತೋರಿದ ದಾರಿಯಲ್ಲಿ ನಡೆದಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದು ನುಡಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಸಯ್ಯದ್ ಯಾಸಿನ್ ಅವರು ಮಾತನಾಡಿ, ಈ ದೇಶದ ಬಡವರು, ದಲಿತರು, ರೈತರ ಬಗ್ಗೆ ಗಂಭೀರ ಚಿಂತನೆ ನಡೆಸಿದ ಶ್ರೇಷ್ಠ ನಾಯಕ ಡಾ ಜಗಜೀವನರಾಮ್ ಅವರು. ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದ ಏಳ್ಗೆಗೆ, ನಂತರ  ಬಡವರ ಏಳ್ಗೆಗೆ ಹಲವು ರೀತಿಯ ಚಿಂತನೆ ಮಾಡಿದ ಶ್ರೇಷ್ಠ ರಾಷ್ಟ್ರ ನಾಯಕರು. ಮುಖ್ಯವಾಗಿ ಜಾತ್ಯತೀತ ರಾಷ್ಟ್ರ ನಿರ್ಮಿಸುವ ಸಂಕಲ್ಪ ಹೊಂದಿದ್ದವರು ಎಂದು ವಿವರಿಸಿದರು.

ಲೇಖಕಿ ಮಾಯಾದೇವಿ ಚರಂತಿಮಠ, ಜಾಗೃತಿ ದೇಶಮಾನೆ, ಜಗನ್ನಾಥ ಸುಂಕಾರಿ, ಜಾಕೋಬ್ ಅವರನ್ನು ಅತಿಥಿಗಳು ಸತ್ಕರಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸತ್ಕರಿಸಲಾಯಿತು. ಹೊಲಿಗೆ ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ಅತಿಥಿಗಳು ಈ ಸಂದರ್ಭದಲ್ಲಿ ಹೊಲಿಗೆ ಯಂತ್ರ ವಿತರಿಸಿದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಡ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ, ತಾಪಂ ಅಧ್ಯಕ್ಷ ಚಂದ್ರಶೇಖರ, ಜಿಪಂ ಸಿಇಓ ವಿಜಯಕುಮಾರ, ಜಿಲ್ಲಾ ಪೊಲೀಸ್ ವರಿಷ್ಠ ಎನ್ ಶಶಿಕುಮಾರ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಟಿ ನರಸಪ್ಪ ವೇದಿಕೆಯಲ್ಲಿದ್ದರು. ತಹಸೀಲದಾರ ಡಾ ಮಧುಕೇಶ್ವರ ಅವರು ಸ್ವಾಗತಿಸಿದರು. ದಂಡಪ್ಪ ಬಿರಾದಾರ ನಿರೂಪಿಸಿದರು. ಬೆಳಿಗ್ಗೆ ನಗರದ ಡಾ.ಜಗಜೀವನರಾಮ್ ವೃತ್ತದಿಂದ ರಂಗಮಂದಿರದವರೆಗೆ ಬಾಬೂಜಿ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.

ಸಚಿವರ ಹೇಳಿಕೆಗೆ ಖಂಡನೆ
ರಾಯಚೂರು:
ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೊಡಬೇಕಾದ ಕೂಲಿಯನ್ನು ಯಾವುದೇ ಪಂಚಾಯಿತಿಯಲ್ಲಿಯೂ ಬಾಕಿ ಉಳಿಸಿಕೊಂಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಅಸಂಘಟಿತ ವಲಯ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಚ್ ಮಾಸ್ತರ್ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರು ಕೂಲಿ ಹಣ ನೀಡುವಂತೆ ಕೇಳಲು ಹೋದ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಸ್ಪಷ್ಟ ನಿರ್ದಶನವಾಗಿದೆ. ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.