ADVERTISEMENT

ಬಸ್ ಡಿಪೊ ಇದ್ದರೂ ಪ್ರಯಾಣಿಕರಿಗೆ ಸೌಲಭ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 13:10 IST
Last Updated 20 ಫೆಬ್ರುವರಿ 2011, 13:10 IST

ದೇವದುರ್ಗ: ತಾಲ್ಲೂಕಿನ ಬಹುದಿನಗಳ ಹೋರಾಟದ ಫಲವಾಗಿ ಕೊನೆಗೂ ಮಂಜೂರಾದ ಬಸ್ ಡಿಪೋ ಹೆಸರಿಗೆ ಮಾತ್ರ ಇದೆ ಹೊರೆತು ಅದರಿಂದ ಪ್ರಯಾಣಿಕರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ದಾನಪ್ಪ ಆಲ್ಕೋಡ್ ಆರೋಪಿಸಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುಮಾರು 186 ಗ್ರಾಮಗಳ ಪೈಕಿ ಸುಮಾರು 150 ಗ್ರಾಮಗಳಿಗೆ ಕನಿಷ್ಠ ಬಸ್ ಸಂಚರಿಸುವಷ್ಟು ರಸ್ತೆಗಳು ಸುಧಾರಣೆ ಕಂಡಿವೆ.

ಗ್ರಾಮೀಣ ಜನರು ಬೆಳಗಾದರೆ ಸಾಕು ಹತ್ತಾರು ಕಿಮೀ ದೂರ ಕಾಲ್ನಡಿಗೆ ಮೂಲಕ ತಿರುಗಾಡುವಂತ ಪರಿಸ್ಥಿತಿ ಇದೆ. ತಾಲ್ಲೂಕಿಕೊಂದು ಬಸ್ ಡಿಪೋ ಅವಶ್ಯಕತೆ ಇರುವುದನ್ನು ಅರಿತು ಸುಮಾರು ದಶಕದ ಕಾಲ ದೊಡ್ಡ ಮಟ್ಟದ ಹೋರಾಟದ ನಂತರ ಅದರ ಫಲವಾಗಿಯೇ ಬಸ್ ಡಿಪೋ ನೀಡಿ ಮೂರು ವರ್ಷಗಳು ಕಳೆದರೂ ಬಹುತೇಕ ಗ್ರಾಮಗಳ ಜನರು ಸರ್ಕಾರಿ ಬಸ್ ನೋಡಿಲ್ಲ ಎಂದರು.

ಕಾಟಾಚಾರಕ್ಕೆ ಮಾತ್ರ ಬಸ್ ಡಿಪೋ ಇದೆ. ಅವಶ್ಯಕ ಸೌಲಭ್ಯಗಳು ಇಲಾಖೆ ನೀಡಿಲ್ಲ. ಈ ಬಸ್ ಡಿಪೋಗೆ ನೀಡಬೇಕಾದ ಬಸ್  ನೀಡದೆ ಇರುವುದರಿಂದ ಗ್ರಾಮೀಣ ಪ್ರದೇಶಕ್ಕೆ ಬಸ್ ಬರುತ್ತಿಲ್ಲ. ಅರಕೇರಾ ಹೋಬಳಿಯ ಬಹುತೇಕ ಗ್ರಾಮಗಳ ರಸ್ತೆಗಳು ಅಭಿವೃದ್ಧಿ ಕಂಡಿವೆ. ಇಂದಿಗೂ ಬಸ್ ಸೌಲಭ್ಯ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ವರ್ಷಕ್ಕೆ ಹತ್ತು ಜನರು ವ್ಯವಸ್ಥಾಪಕರು ವರ್ಗಾವಣೆಯಾಗಿ ಹೋಗುವುದರಿಂದ ಬಸ್ ಡಿಪೊ ಈಗ ಹಲವಾರು ಸಮಸ್ಯ ಮತ್ತು ಹಗರಣಗಳ ತಾಣವಾಗಿದೆ. ಕೆಲವು ಗ್ರಾಮಗಳಿಗೆ ಬಸ್ ಸಂಚಾರಕ್ಕಾಗಿ ಪತ್ರ ಬರೆಯಲಾಗಿದ್ದರೂ ಇಂದಿಗೂ ಕ್ರಮಕ್ಕೆ ಮುಂದಾಗಿಲ್ಲ. ಇದಕ್ಕೆಲ್ಲ ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಮುಂದೆ ಇದೇ ರೀತಿ ಮುಂದುವರೆದರೆ ಡಿಪೋ ವ್ಯವಸ್ಥಾಪಕರ ವಿರುದ್ಧವೇ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅವ್ಯವಸ್ಥೆ: ಪಕ್ಕದ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ಮಾಡಿದರೂ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುವಂತಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳು ತೊಂದರೆ ಎದುರಾಗಿದೆ. ಬೇಸಿಗೆ ಆರಂಭವಾಗಿದೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವುದು ಇಲಾಖೆಯ ಜವಾಬ್ದಾರಿ ಇದ್ದರೂ ಕಳೆದ ಅನೇಕ ವರ್ಷಗಳಿಂದ ಕ್ರಮಕ್ಕೆ ಮುಂದಾಗಿಲ್ಲ ಇದರಿಂದ ಪ್ರಯಾಣಿಕರು ಪಕ್ಕದ ಹೊಟೇಲ್‌ಗಳ ಮೊರೆ ಹೋಗಬೇಕಾಗದೆ. ಶೌಚಾಲಯ ನಿರ್ಮಿಸ ಲಾ ಗಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಮಹಿಳೆ ಯರಿಗೆ ಇನ್ನಿಲ್ಲದ ತೊಂದರೆ ಎದುರಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.