ADVERTISEMENT

ಬಸ್ ಸಂಚಾರಕ್ಕೆ ತಟ್ಟಿದ ಸೀಮಾಂಧ್ರ ಪ್ರತಿಭಟನೆ ಬಿಸಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 12:43 IST
Last Updated 1 ಆಗಸ್ಟ್ 2013, 12:43 IST

ರಾಯಚೂರು: ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆ ವಿರೋಧಿಸಿ ಸೀಮಾಂಧ್ರ ಭಾಗದ ರಾಯಲ್‌ಸೀಮಾ ಪ್ರದೇಶದ ಕರ್ನೂಲ್, ಅನಂತಪುರ ಹಾಗೂ ಇತರ ಕಡೆ ನಡೆಯುತ್ತಿರುವ ತೀವ್ರ ಪ್ರತಿಭಟನೆ ಬಿಸಿ ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗ, ಬೇರೆ ಜಿಲ್ಲೆಯ ಬಸ್ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಆಂಧ್ರಪ್ರದೇಶದ ಬಸ್‌ಗಳಿಗೆ ಬುಧವಾರ ತಟ್ಟಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ವಿವಿಧ ಡಿಪೋಗಳಿಂದ ಆಂಧ್ರ ಪ್ರದೇಶದ ರಾಯಲ್‌ಸೀಮಾ ಭಾಗದ ಕರ್ನೂಲ್, ಅನಂತಪುರ, ಗದ್ವಾಲ್, ಶ್ರೀಶೈಲ, ಐಜ, ಮಂತ್ರಾಲಯ ಸೇರಿದಂತೆ 17 ಬಸ್ ಸಂಚರಿಸುತ್ತಿದ್ದವು. ಕರ್ನೂಲ್‌ಗೆ 6 ಬಸ್, ಮಂತ್ರಾಲಯಕ್ಕೆ 11 ಬಸ್ ಸಂಚರಿಸುತ್ತಿದ್ದವು. ಸೀಮಾಂಧ್ರಪ್ರದೇಶದಲ್ಲಿ ಬುಧವಾರ ಪ್ರತಿಭಟನೆ ಆರಂಭಗೊಂಡಿದ್ದರಿಂದ ಈ ಸಂಚಾರ ಮಾರ್ಗದಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಆಗಿದೆ.

ಕರ್ನೂಲ್‌ಗೆ ತೆರಳುವ ಬಸ್ ಕರ್ನೂಲ್‌ಗಿಂತ ಮುಂಚೆಯೇ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ವಾಪಸ್ ಆಗುತ್ತಿವೆ. ಅದೇ ರೀತಿ ಮಂತ್ರಾಲಯಕ್ಕೆ ಹೋಗುವ ಬಸ್‌ಗಳು ಗಿಲ್ಲೇಸುಗೂರು ಗ್ರಾಮದಲ್ಲಿ ನಿಲುಗಡೆಗೊಳ್ಳುತ್ತಿವೆ. ಶ್ರೀಶೈಲಕ್ಕೆ ತೆರಳುವ ಬಸ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಎಲ್ಲಿ ಪ್ರತಿಭಟನೆ ಪರಿಸ್ಥಿತಿ ಇದೆಯೋ ಗಮನಿಸಿ ಬಸ್‌ಗಳು ಸಂಚಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ದಿನ ಅಂದಾಜು ಒಂದುವರೆ ಲಕ್ಷ ರೂಪಾಯಿ ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗಕ್ಕೆ ನಷ್ಟವಾಗಿದೆ. ಬೇರೆ ಜಿಲ್ಲೆಯ ಬಸ್‌ಗಳಿಗೂ ಇದೇ ರೀತಿ ಸಮಸ್ಯೆ ಆಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.

ತೆಲಂಗಾಣ ಪ್ರದೇಶಗಳಾದ ಮಹೆಬೂಬನಗರ, ಹೈದರಾಬಾದ್, ಸಿಕಂದರಬಾದ್, ಮಕ್ತಲ್ ಭಾಗದಲ್ಲಿ ಬಸ್ ಸಂಚಾರ ಎಂದಿನಂತೆ ಇದೆ. ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ತೊಂದರೆ ಆಗಿಲ್ಲ. ಪ್ರತಿ ನಿತ್ಯ ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದಿಂದ 57 ಬಸ್‌ಗಳು ಆಂಧ್ರಪ್ರದೇಶಕ್ಕೆ ಸಂಚರಿಸುತ್ತಿದ್ದವು. ಈ ದಿನ ರಾಯಲ್‌ಸೀಮಾ ಭಾಗದಲ್ಲಿ 17 ಬಸ್‌ಗಳಿಗೆ ಸಂಚಾರ ವ್ಯತ್ಯಯ ಬಿಟ್ಟರೆ ಮಿಕ್ಕಂತೆ ಎಲ್ಲ ಬಸ್‌ಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.