ADVERTISEMENT

ಮಳೆ ಹಾನಿ: ತುರ್ತು ಸ್ಪಂದನೆಗೆ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 8:51 IST
Last Updated 12 ಜೂನ್ 2018, 8:51 IST

ರಾಯಚೂರು: ಮಳೆಯಿಂದ ರೈತರ ಬೆಳೆ ಹಾಗೂ ಮನೆಗಳಿಗೆ ಹಾನಿ ಉಂಟಾದರೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾನಿಗೊಳಗಾದವರಿಗೆ ಸರಿಯಾದ ಸಮಯದಲ್ಲಿ ಪರಿಹಾರ ದೊರೆಯದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ADVERTISEMENT

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಮಾತನಾಡಿ, ಶೇ 90ರಷ್ಟು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ. ಶೇ 89ರಷ್ಟು ಪುಸ್ತಕಗಳನ್ನು ನೀಡಲಾಗಿದೆ. ಹಿಂದಿ, ತೆಲುಗು ಹಾಗೂ ಉರ್ದು ಪುಸ್ತಕಗಳು ಇನ್ನೂ ಬಂದಿಲ್ಲ. ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪ ವಿಭಾಗಾಧಿಕಾರಿ ವೀರಮಲ್ಲಪ್ಪ ಪೂಜಾರ್, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮೀಬಾಯಿ, ಯೋಜನಾ ಅಧಿಕಾರಿ ಈರಣ್ಣ ಬಿರಾದಾರ ಇದ್ದರು.

ಉತ್ಪಾದನೆ ವೆಚ್ಚ ಕಡಿಮೆಯಾಗಿಲ್ಲ: ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಾದಲ್ಲಿ ರಾತ್ರಿಗಿಂತ ಹಗಲು ಹೆಚ್ಚು ವಿದ್ಯುತ್ ನೀಡಬಹುದು. ಹೀಗಾಗಿ ವಿದ್ಯುತ್‌ ಉತ್ಪಾದನೆಗೆ ತಗುಲುವ ವೆಚ್ಚ ಇಳಿಕೆಯಾಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾನಾಡಿ,ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ ಎಂದ ಮಾತ್ರಕ್ಕೆ ಲೋಡ್ ಶೆಡ್ಡಿಂಗ್ ಕಡಿತಗೊಳಿಸಲಾಗುವುದು ಎಂದಲ್ಲ. ಸಿಂಗರೇಣಿ ಕಂಪನಿಯಿಂದ ಬ್ರಿಡ್ಜ್ ಲಿಂಕೇಜ್ ಮುಂದುವರಿಸಲಾಗಿದೆ. ಮೇ 31ಕ್ಕೆ ಒಡಂಬಡಿಕೆ ಮುಗಿದ ಕಾರಣ ಅವರು ಮುಂದುವರಿಸುವುದಿಲ್ಲ ಎಂದಿದ್ದರು. ತೆಲಂಗಾಣ ಸರ್ಕಾರ ಹೊಸ ಶಾಖೋತ್ಪನ್ನ ಕೇಂದ್ರ ಆರಂಭಿಸುತ್ತಿದ್ದು, ಕಲ್ಲಿದ್ದಲು ನೀಡಲಾಗದು ಎಂದಿತ್ತು. ಆದರೆ, ಅದಕ್ಕಿನ್ನು ಕನಿಷ್ಠ ಮೂರು ವರ್ಷ ಕಾಲಾವಕಾಶ ಬೇಕಿದ್ದು, ಅಲ್ಲಿಯವರೆಗೂ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ನಿರ್ದೇಶನ ನೀಡಿದ್ದು, ಸದ್ಯಕ್ಕೆ ಸಮಸ್ಯೆ ನಿವಾರಣೆಯಾಗಿದೆ ಎಂದು ಹೇಳಿದರು.

ಕೇಂದ್ರ ನಿರ್ದೇಶನ ನೀಡಿರುವುದರಿಂದ ನಾವು ಶೇ 100 ಕೇಳಿದರೆ ಕನಿಷ್ಠ ಶೇ 75ಷ್ಟಾದರೂ ಕೊಡಲೇಬೇಕಾದ ಪರಿಸ್ಥಿತಿ ಎಸ್‌ಸಿಸಿಎಲ್ ಗಣಿ ಕಂಪನಿಗೆ ಇದೆ. ವೈಟಿಪಿಎಸ್ ಮತ್ತು ಬಿಟಿಪಿಎಸ್‌ಗೆ ವರ್ಷಕ್ಕೆ 9 ಮಿಲಿಯನ್ ಟನ್ ಕಲ್ಲಿದ್ದಿಲು ಬೇಕಿದೆ ಎಂದರು.

ಹಾರುಬೂದಿ ಹಂಚಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ನಡೆಸಿದ್ದು, ಅದನ್ನು ಸರಿಯಾಗಿ ಹಂಚಿಕೆ ಮಾಡಲಾಗುವುದು. ವೈಟಿಪಿಎಸ್ ಭೂ ಸಂತ್ರಸ್ತರ ನೇಮಕ ಪ್ರಕ್ರಿಯೆಯನ್ನು ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ವಸತಿ ನಿಲಯಗಳಲ್ಲಿ ಶೌಚಾಲಯಗಳು ಸಮರ್ಪಕವಾಗಿಲ್ಲ ಎನ್ನುವ ದೂರುಗಳು ಮೇಲಿಂದ ಮೇಲೆ ಬರುತ್ತಿವೆ. ಈ ಬಗ್ಗೆ ಕೂಡಲೇ ಗಮನಹರಿಸಿ ಕೆಲಸ ಮಾಡಿ
- ಜಿ.ಕುಮಾರನಾಯಕ, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.