ADVERTISEMENT

‘ಮೀಸಲಾತಿ ವಿಚಾರ ಕ್ರಾಂತಿಕಾರಕ ಹೆಜ್ಜೆ’

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ವೈ.ಶ್ರೀಕಾಂತಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 7:23 IST
Last Updated 5 ಮಾರ್ಚ್ 2018, 7:23 IST

ರಾಯಚೂರು: ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ನಡೆಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ಎಂದು ಸಂಸದ ಬಿ.ವಿ.ನಾಯಕ ಹೇಳಿದರು.

ಪಂಡಿತ್ ಸಿದ್ಧರಾಮ ಜಂಬಲ ದಿನ್ನಿ ರಂಗಮಂದಿರದಲ್ಲಿ ಭಾನುವಾರ ಆಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘ ದಿಂದ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ವೈ. ಶ್ರೀಕಾಂತ ಅವರಿಗೆ ಯೋಜಿಸಿದ್ದ ಅಭಿನಂಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ನ್ಯಾಯದ ತತ್ವದಡಿ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರು ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಕೆಪಿಎಸ್‌ಸಿ ಸದಸ್ಯತ್ವವನ್ನು ಕಲ್ಪಿಸಿದ್ದಾರೆ. ಈ ಅವಕಾಶ ಮೊದಲಬಾರಿಗೆ ದೊರೆತಿದ್ದು, ಶ್ರೀಕಾಂತ ಅವರು ಈ ಭಾಗದ ಅಭಿವೃದ್ಧಿಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ADVERTISEMENT

ಮಂದಕಲ್‌ನ ಬಸವರಾಜ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದವರು ದುಶ್ಚಟಗಳಿಂದ ದೂರವಿದ್ದು, ಸಾಧನೆ ಮಾಡಬೇಕು. ಮನುಷ್ಯ ಜನ್ಮವನ್ನು ಸಾರ್ಥಕತೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ, ಮುಖಂಡರಾದ ಎ.ಪಾಪ ರೆಡ್ಡಿ, ರಾಜಾ ರಾಯಪ್ಪ ನಾಯಕ, ರವಿ ಬೋಸರಾಜು ಮಾತನಾಡಿದರು.

ಸಮಾಜದ ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆಪಿಎಸ್‌ಸಿ ಸದಸ್ಯ ವೈ.ಶ್ರೀಕಾಂತ ದಂಪತಿಯನ್ನು ವಿವಿಧ ಸಮಾಜದ ಮುಖಂಡರು ಸನ್ಮಾನಿಸಿದರು.

ಎಪಿಎಂಸಿ ಅಧ್ಯಕ್ಷ ಅಮರೆಗೌಡ ಹಂಚಿನಾಳ, ಈ.ಆಂಜನೇಯ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ರಾಮಣ್ಣ ಇರಬಗೇರಾ, ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ಅಮರೇಶಪ್ಪ ಆದೋನಿ, ಕೆ.ಶಾಂತಪ್ಪ, ವೆಂಕೋಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.