ಸಿಂಧನೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆ ಮತ್ತು ಭೂ ಪರಿಮಿತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಭೂ ಹೋರಾಟ ನಡೆಸಲು ಕರ್ನಾಟಕ ರೈತ ಸಂಘ ಇತ್ತೀಚೆಗೆ ನಡೆದ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು.
ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಇದ್ದ ಸರ್ಕಾರಗಳು ನೆಪಕ್ಕಾದರೂ ಭೂಹೀನರಿಗೆ ಭೂಮಿ ಕೊಡುವ ಬಗ್ಗೆ ಚರ್ಚೆ ಮಾಡುತ್ತಿದ್ದವು ಮತ್ತು ಅಲ್ಲಲ್ಲಿ ಸರ್ಕಾರಿ ಭೂಮಿಯನ್ನು ಭೂಹೀನರಿಗೆಂದೇ ಮೀಸಲಾಗಿಟ್ಟಿದ್ದವು.
ಆದರೆ ಬಿಜೆಪಿ ಸರ್ಕಾರಕ್ಕೆ ಇಂತಹ ಯಾವುದೇ ಬದ್ಧತೆಗಳಿಲ್ಲ. ಇಡೀ ವಿಧಾನಸಭೆಯ ಆಡಳಿತವನ್ನು ಪೋಸ್ಕೊ, ಜಿಂದಾಲ್, ಕಲ್ಯಾಣಿ, ಕಾರಿಡಾರ್, ವಿಮಾನ ನಿಲ್ದಾಣ, ಎಸ್‌ಇಜಡ್ ಮತ್ತು ಗಣಿಗಾರಿಕೆಗೆ ಭೂಮಿಯನ್ನು ಕೊಡುವುದಕ್ಕಾಗಿ ಮೀಸಲಾಗಿರಿಸಿದೆ. ಈ ಸರ್ಕಾರದಲ್ಲಿ ಭೂಹೀನರಿಗೆ ಒಂದು ಗುಂಟೆ ಜಾಗವನ್ನೂ ಸಹ ಹಂಚದಿರುವುದು ಮಹಾಸಾಧನೆ ಎಂದು ಟೀಕಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಭೂಮಿಯನ್ನು ಹರಾಜಿಗಿಟ್ಟ ಹೆಗ್ಗಳಿಕೆ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಹಳೆ ಭೂಮಾಲಿಕರು ಮತ್ತು ಲ್ಯಾಂಡ್‌ಮಾಫಿಯಾ ಸ್ವಾಧೀನದಲ್ಲಿ ರಾಜ್ಯದ ಭೂಮಿ ಉಳಿದಿದೆ ವಿನಃ ಸಾಮಾನ್ಯರ ಹತ್ತಿರ ಭೂಮಿಯೇ ಇಲ್ಲದಂತಾಗಿದೆ. ಕಂದಾಯ ಮಂತ್ರಿಯೇ ಭೂಮಾಫಿಯಾ ದೊರೆಯಾದ್ದರಿಂದ ಬಡವರಿಗೆ ಭೂಮಿ ಹಂಚುವುದನ್ನು ನಿರೀಕ್ಷೆ ಮಾಡುವುದು ಅಸಾಧ್ಯದ ಮಾತಾಗಿದೆ ಎಂದರು.
ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ 1972-73ರಲ್ಲಿ ಅನೇಕ ಜಮೀನ್ದಾರರು ತಮ್ಮ ಭೂಮಿಯ ಬಗ್ಗೆ ಸುಳ್ಳು ಡಿಕ್ಲರೇಷನ್ ನೀಡಿ ಭೂ ನ್ಯಾಯ ಮಂಡಳಿಯ ಮೂಲಕ ತಾವು ಕಾನೂನುಬದ್ಧವಾಗಿ ಭೂಮಿ ಉಳಿಸಿಕೊಂಡಿರುವುದಾಗಿ ಘೋಷಣೆ ಮಾಡಿಕೊಂಡ್ದ್ದಿದಾರೆ. ಆದರೆ 1972ರಿಂದ 2007ರವರೆಗೆ 2.40ಲಕ್ಷ ಎಕರೆ ಮಾತ್ರ ಹೆಚ್ಚುವರಿ ಭೂಮಿ ಎಂದು ಪರಿಗಣಿಸಲ್ಪಟ್ಟಿದೆ.
ಭೂಮಿಯನ್ನು ಎಬಿಸಿಡಿ ಸೇರಿದಂತೆ 12 ವಿಧದಲ್ಲಿ ವಿಂಗಡಣೆ ಮಾಡಲಾಗಿದೆ. 93ಸಾವಿರ ಎಕರೆ ಅರಣ್ಯ ಭೂಮಿ ಇದೆ. 1.34 ಲಕ್ಷ ಎಕರೆ ರಾಯಚೂರು ಜಿಲ್ಲೆಯಲ್ಲಿಯೇ ಸರ್ಕಾರಿ ಭೂಮಿ ಇದೆ. ಇನ್ನು ಹತ್ತಾರು ಲಕ್ಷ ಎಕರೆ ಭೂಮಿಯನ್ನು ಜಮೀನ್ದಾರರು ಸರ್ಕಾರವನ್ನು ವಂಚಿಸಿ ಉಳಿಸಿಕೊಂಡಿದ್ದಾರೆ.
ಅಂತಹ ಅಕ್ರಮ ಭೂಮಿಯನ್ನು ಭೂರಹಿತರಿಗೆ ಹಂಚುವ ಉದ್ದೇಶದ ಹಿನ್ನೆಲೆಯಲ್ಲಿ ಹಿಂದೆ ಜಮೀನ್ದಾರರು ನೀಡಿರುವ ನಕಲಿ ಡಿಕ್ಲರೇಷನ್‌ಗಳನ್ನು ಪತ್ತೆಹಚ್ಚಿ ರಾಜ್ಯಾದ್ಯಂತ ರಾಜಿರಹಿತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಾಗೆಯೇ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ತಾಲ್ಲೂಕು ಮಟ್ಟದಿಂದ ರೂಪಿಸಲಾಗುತ್ತಿದ್ದು, ಭ್ರಷ್ಟಾಚಾರಿಗಳ ಹೆಸರುಗಳನ್ನು ಪ್ರಕಟಿಸಿ ಅವರವರ ನಿವಾಸದ ಮುಂದುಗಡೆಯಲ್ಲಿಯೇ ಧರಣಿ ಚಳವಳಿ ಆರಂಭಿಸಲಾಗುವುದು ಎಂದು ಮಾನಸಯ್ಯ ವಿವರಿಸಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ರಾಜ್ಯ ಮುಖಂಡ ಬಿ.ಬಸವಲಿಂಗಪ್ಪ, ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಬಡಿಗೇರ, ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರ ಗುರುಪಾದಸ್ವಾಮಿ, ರಮೇಶ ಪಾಟೀಲ್ ಬೇರ‌್ಗಿ, ಬಸವರಾಜ ಹೊಸಳ್ಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.