ADVERTISEMENT

ವೆಂಕಟೇಶ ನಾಯಕಗೆ 930ನೇ ರ‍್ಯಾಂಕ್

ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:36 IST
Last Updated 29 ಏಪ್ರಿಲ್ 2018, 13:36 IST
ವೆಂಕಟೇಶ  ನಾಯಕ
ವೆಂಕಟೇಶ ನಾಯಕ   

ಸಿಂಧನೂರು: ತಾಲ್ಲೂಕಿನ ಧುಮತಿ ಗ್ರಾಮದ  ವೆಂಕಟೇಶ ನಾಯಕ ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 930ನೇ ರ‍್ಯಾಂಕ್ ಗಳಿಸಿದ್ದಾರೆ. ತಾಲ್ಲೂಕಿನ ಧುಮತಿ ಗ್ರಾಮದ ಎಚ್.ದ್ಯಾವಯ್ಯ ನಾಯಕ ಹಾಗೂ ನಾಗಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಎರಡನೇ ಪುತ್ರನಾಗಿ ಜೂನ್ 5, 1991 ರಂದು ವೆಂಕಟೇಶ ನಾಯಕ ಜನಿಸಿದರು.

1 ರಿಂದ 4ನೇ ತರಗತಿಯವರೆಗೆ ಧುಮತಿ ಗ್ರಾಮ ಹಾಗೂ 5 ರಿಂದ 10ನೇ ತರಗತಿಯವರೆಗೆ ಪೋತ್ನಾಳ ಗ್ರಾಮದಲ್ಲಿ ದೇವೇಂದ್ರಪ್ಪ ನಾಯಕ ಅವರ ವಸತಿ ನಿಲಯದಲ್ಲಿ ಇದ್ದುಕೊಂಡೆ ಅಭ್ಯಾಸ ಪೂರೈಸಿದರು. ನಂತರ ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದರು. ತದನಂತರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 18ನೇ ರ‍್ಯಾಂಕ್ ಪಡೆದು ಮೈಸೂರಿನಲ್ಲಿ ಬಿಇ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿಯನ್ನು 2013 ರಲ್ಲಿ ಪಡೆದರು.

ವೆಂಕಟೇಶ ನಾಯಕ ಕೆಎಎಸ್ ತರಬೇತಿ ಪಡೆದು 2016ನೇ ಸಾಲಿನಲ್ಲಿ ಕೆಜಿಐ ಸಹಾಯಕ ನಿರ್ದೇಶಕ ಹುದ್ದೆಯನ್ನು ಗಿಟ್ಟಿಸಿಕೊಂಡರು. ಸರ್ಕಾರಿ ನೌಕರಿ ಮಾಡುತ್ತಲೇ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ತಯಾರಿಗಾಗಿ ದೆಹಲಿಯಲ್ಲಿ ವಿಶೇಷ ತರಬೇತಿ ಪಡೆದರು.

ADVERTISEMENT

‘ನನ್ನ ಸಾಧನೆಗೆ ತಂದೆ–ತಾಯಿಯ ಪರಿಶ್ರಮ ಹಾಗೂ ಪ್ರೋತ್ಸಾಹವೇ ಕಾರಣ. ಅವರ ಸಂಪೂರ್ಣ ಸಹಕಾರದಿಂದ ನಾನು ದೇಶ ಗುರುತಿಸುವ ಮಟ್ಟಕ್ಕೆ ಸಾಧನೆ ಮಾಡಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಸಹ ತಾವು ನೋಡಿರಲಿಲ್ಲ.

ಸ್ನೇಹಿತ ಸಂತೋಷ ಮಾಹಿತಿ ನೀಡಿದ್ದರಿಂದ ಫಲಿತಾಂಶ ಗೊತ್ತಾಯಿತು. ನನ್ನ ವಿದ್ಯಾಭ್ಯಾಸಕ್ಕೆ ಪಾಪರಾವ್‌ ಕ್ಯಾಂಪ್‌ನ ಪಾಪರಾವ್ ಹಾಗೂ ನನ್ನ ಸಹಪಾಠಿಗಳು ಸಾಕಷ್ಟು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಅವರ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ವೆಂಕಟೇಶ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡತನ ಎಂಬುದು ಶಾಪವಲ್ಲ. ಬಡತನ ಎಂಬ ಕಾರಣವನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮೊಟಕುಗೊಳಿಸಬಾರದು.

ಜೀವನದಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಂಟು, ಓದಿನ ಹಸಿವನ್ನು ಹೆಚ್ಚಿಸಿಕೊಂಡು ಸಾಧನೆಯ ಗುರಿ ಮುಟ್ಟಲು ಕಠಿಣ ಪರಿಶ್ರಮ ಪಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.