ADVERTISEMENT

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:44 IST
Last Updated 5 ಏಪ್ರಿಲ್ 2013, 6:44 IST

ಸಿಂಧನೂರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕರವೀರಪ್ರಭು ಕ್ಯಾಲಕೊಂಡ ಮತ್ತು ಅವರ ಸಿಬ್ಬಂದಿ ಮೇಲೆ ಕೋಳಬಾಳ ಗ್ರಾಮದ ಕೆಲ ದುಷ್ಕರ್ಮಿಗಳು ಹಲ್ಲೆ ಎಸಗಿದ ಘಟನೆ ಬುಧವಾರ ರಾತ್ರಿ 12.30ಕ್ಕೆ ನಡೆದಿದೆ.

ರಾತ್ರಿ 9ಗಂಟೆಯ ಸುಮಾರು ಅಪಘಾತದಿಂದ ಮೃತಪಟ್ಟ ಬಾಲಕನೊಬ್ಬನನ್ನು ಕೋಳಬಾಳ ಗ್ರಾಮಸ್ಥರು ಆಸ್ಪತ್ರೆಗೆ ಕರೆ ತಂದಿದ್ದು, ಮೃತ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ವಿಳಂಬ ಮಾಡಿದ್ದಾರೆಂದು ಆಪಾದಿಸಿ ಪಾನಮತ್ತರಾದ ಕೆಲವರು ದಾಂದಲೆ ಎಬ್ಬಿಸಿ ವೈದ್ಯರನ್ನು ಅಂಗಿ ಹಿಡಿದು ಎಳೆದಾಡಿದ್ದಾರೆ.

ಅಲ್ಲದೆ ಸಿಬ್ಬಂದಿಗಳಾದ ಗೀತಾ, ರಾಧಾ, ಪ್ರಹ್ಲಾದ, ಮಲ್ಲಪ್ಪ, ಸಂತೋಷ ಮತ್ತಿತರರನ್ನು ಹಲ್ಲೆಗೊಳಿಸಿದ್ದಾರೆಂದು ತಿಳಿದು ಬಂದಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಿಂಗಪ್ಪ ತನಿಖೆ ಕೈಗೊಂಡಿದ್ದಾರೆ.

ಘಟನೆಯ ವಿವರ: ಮಸ್ಕಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಕೋಳಬಾಳ ಬಳಿ ಬಾಲಕನೋರ್ವನ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದಿದೆ.  ಸಾವು-ಬದುಕಿನಲ್ಲಿ ಹೋರಾಡುತ್ತಿದ್ದ ಬಾಲಕನನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದಾರಿಯಲ್ಲಿ ಆತ ಅಸುನೀಗಿದ್ದಾನೆ. ಆಸ್ಪತ್ರೆಗೆ ಬಂದ ನಂತರ ವೈದ್ಯರು ತಪಾಸಣೆ ಮಾಡಿ, ಬಾಲಕ ಅಸುನೀಗಿರುವ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದಾರೆ.

ಕೋಳಬಾಳ ತುರ್ವಿಹಾಳ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಅಲ್ಲಿನ ಪೊಲೀಸರಿಗೆ ದೂರವಾಣಿಯಲ್ಲಿ ಮಾತನಾಡಿ ಅಪಘಾತದಲ್ಲಿ ಮೃತಪಟ್ಟಿರುವ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಲು ವಿನಂತಿಪತ್ರ ಕೊಡುವಂತೆ ಕೇಳಿದ್ದಾರೆ.

ಆಸ್ಪತ್ರೆಗೆ ಆಗಮಿಸಿದ ತುರ್ವಿಹಾಳ ಪೊಲೀಸರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಮೃತನ ಸಂಬಂಧಿಕರ ನಡುವೆ ಪ್ರಕರಣದ ಬಗ್ಗೆ ಹಣದ ಪಂಚಾಯಿತಿ ನಡೆಸಿದ್ದಾರೆ. ರಾತ್ರಿ 12ರವರೆಗೆ ನಡೆದ ಪಂಚಾಯಿತಿಯಲ್ಲಿ ಯಾವುದೇ ಒಪ್ಪಂದಕ್ಕೆ ಬಾರದೆ ಮುರಿದು ಬಿದ್ದಿದೆ. ಆಮೇಲೆ ಬಾಲಕನ ಮರಣೋತ್ತರ ಪರೀಕ್ಷೆ ನಡೆಸುವಂತೆ ವೈದ್ಯರನ್ನು ಒತ್ತಾಯಿಸಿದ್ದಾರೆ. ಆಗಲೂ ಪೊಲೀಸರು ಅರ್ಜಿ ನೀಡಿದ ನಂತರವೇ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ವೈದ್ಯಾಧಿಕಾರಿಗಳು ಉತ್ತರಿಸಿದ್ದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಸಿಬ್ಬಂದಿಯವರ ಮೇಲೆ ಹಲ್ಲೆ ಎಸಗಿದರೆಂದು     ಮಲ್ಲಪ್ಪ, ಸಂತೋಷ ಮತ್ತಿತರರು ತಿಳಿಸಿದರು.

`ಬಾಲಕನ ಮರಣೋತ್ತರ ಪರೀಕ್ಷೆಗೆ ಪಾಲಕರು ಬಂದಾಗ ಅದೇ ಸಮಯದಲ್ಲಿ ವಿಷಸೇವಿಸಿ ಅಸ್ವಸ್ಥಗೊಂಡ ಇಬ್ಬರು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ನಿರತನಾಗಿದ್ದೆ. ಜೊತೆಗೆ ಒಬ್ಬ ಗರ್ಭಿಣಿ ಗೆ ಚಿಕಿತ್ಸೆ ನೀಡುವುದು ಅತ್ಯವಶ್ಯವಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಪಾಲಕರಿಗೆ ಹೇಳಿದಾಗ್ಯೂ ತಮ್ಮ ಮೇಲೆ ಕೆಲವರು ಹಲ್ಲೆ ನಡೆಸಿದರು' ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಕರವೀರಪ್ರಭು ಕ್ಯಾಲಕೊಂಡ ಪ್ರತಿಕ್ರಿಯಿಸಿದರು.

ಪೊಲೀಸರ ನಿರ್ಲಕ್ಷ್ಯ: ತಮ್ಮ ಕಣ್ಣೆದುರಿನಲ್ಲಿಯೇ ಕೋಳಬಾಳ ಗ್ರಾಮಸ್ಥರು ದಾಂಧಲೇ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೂ ತುರ್ವಿಹಾಳ ಪೊಲೀಸರು ಮೌನವಾಗಿದ್ದುದು ತಮಗೆ ತೀವ್ರ ದುಃಖವನ್ನುಂಟು ಮಾಡಿದೆ ಎಂದು ಆಸ್ಪತ್ರೆ ಸಿಬ್ಬಂದಿ `ಪ್ರಜಾವಾಣಿ'ಗೆ ತಮ್ಮ ನೋವು ತೋಡಿಕೊಂಡರು.

`ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ದಯವಿಟ್ಟು ಒಳಗೆ ಬಂದು ರಕ್ಷಣೆ ಕೊಡಿ' ಎಂದು ಕೇಳಿದರೆ ಶಹರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತೆ ತುರ್ವಿಹಾಳ ಪೊಲೀಸರು ಹೇಳಿದರೆಂದು ಸ್ಟಾಫ್ ನರ್ಸ್‌ವೊಬ್ಬರು ತಿಳಿಸಿದರು.ನಂತರ ಶಹರ ಠಾಣೆ ಪಿಎಸ್ಸೈ ಎನ್. ಆರ್.ನಿಂಗಪ್ಪ ಆಸ್ಪತ್ರೆಗೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT