ADVERTISEMENT

ಸಾಲಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ; ಸಹಜ ಜನಜೀವನ, ಎಂದಿನಂತೆ ನಡೆದ ವ್ಯಾಪಾರ ವಹಿವಾಟು

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:39 IST
Last Updated 29 ಮೇ 2018, 10:39 IST
ರಾಯಚೂರಿನಲ್ಲಿ ಸೋಮವಾರ ಬಂದ್ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು(
ರಾಯಚೂರಿನಲ್ಲಿ ಸೋಮವಾರ ಬಂದ್ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು(   

ರಾಯಚೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಿಂದ ರೈತರ ಸಾಲಮನ್ನಾ ಮಾಡಲು ಒತ್ತಾಯಿಸಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿತ್ತು. ಸಾರಿಗೆ ಇಲಾಖೆಯ ಬಸ್‌ ಸಂಚಾರವೂ ಸಾಗಿತ್ತು. ತರಕಾರಿ ಮಾರುಕಟ್ಟೆ, ಬಟ್ಟೆ ಬಜಾರ್ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಕೇಂದ್ರಗಳು ನಿತ್ಯದಂತೆ ಇಂದೂ ಜನರಿಂದ ತುಂಬಿದ್ದವು.

ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ನಗರದಲ್ಲಿ ರಾಜ್ಯ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಶೆಟ್ಟಿಭಾವಿ ವೃತ್ತದಿಂದ ಸರಾಫ್ ಬಜಾರ್, ಬಟ್ಟೆ ಬಜಾರ್, ಮಹಾವೀರ ವೃತ್ತ, ಗಾಂಧಿ ವೃತ್ತದ ಮೂಲಕ ಪ್ರತಿಭಟನೆ ನಡೆಸಿದರು.

ADVERTISEMENT

ಬಿಜೆಪಿಯಿಂದ ಪ್ರತಿಭಟನೆ ನಡೆಸು ವಾಗ ಕೆಲ ಅಂಗಡಿ ಮುಂಗಟ್ಟುಗಳು ಮುಚ್ಚುವ ದೃಶ್ಯ ಕಂಡುಬಂತು. ಸರಾಫ್ ಬಜಾರ್‌ನಲ್ಲಿ ಅರ್ಧದಷ್ಟು ಮಳಿಗೆಗಳು ಬಂದ್‌ ಮಾಡಿದ್ದವು.

ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ, ಈಗ ಮಾತು ಬದಲಿಸಿದ್ದು, ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಕ್ಷಗಳು ಅಪವಿತ್ರವಾದ ಮೈತ್ರಿ ಮಾಡಿಕೊಂಡು ಜನಾದೇಶದ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ, ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಎನ್.ಶಂಕರಪ್ಪ, ದೊಡ್ಡ ಮಲ್ಲೇಶ, ನರಸಪ್ಪ ಯಕ್ಲಾಸಪೂರು, ಆಂಜನೇಯ ಯಕ್ಲಾಸಪೂರು, ಶಶಿರಾಜ ಮಸ್ಕಿ, ನಾರಾಯಣರಾವ್, ರಾಜಕುಮಾರ, ಬಂಡೇಶ ವಲ್ಕಂದಿನ್ನಿ, ರಾಮಚಂದ್ರ ಕಡಗೋಳ, ಎ.ಚಂದ್ರಶೇಖರ, ಮುಕ್ತಿಯಾರ ಇದ್ದರು.

ಸಿಂಧನೂರು ಬಂದ್‌ ವಿಫಲ

ಸಿಂಧನೂರು: ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯ ಘಟಕ ಸೋಮವಾರ ನೀಡಿದ್ದ ಬಂದ್ ಕರೆ ಸಿಂಧನೂರು ತಾಲ್ಲೂಕಿನಾದ್ಯಂತ ಸಂಪೂರ್ಣವಾಗಿ ವಿಫಲಗೊಂಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಲಮನ್ನಾ ಅಸಾಧ್ಯ ಎಂದು ಹೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬಂದ್‌ಗೆ ಕರೆ ನೀಡಿದ್ದರು. ಅದರಂತೆ ಸಿಂಧನೂರು ನಗರದಲ್ಲಿ ಬಿಜೆಪಿಯವರು ಬಂದ್‍ಗೆ ಬೆಂಬಲಿಸುವಂತೆ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಮನವಿ ಮಾಡಿದ್ದರು.

ಸೋಮವಾರ ಬಂದ್‍ಗೆ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲಿಸಲಿಲ್ಲ. ಬೆಳಿಗ್ಗೆ 7 ಗಂಟೆಗೆ ಮಹಾತ್ಮಗಾಂಧಿ ವೃತ್ತದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‍ಆರ್‌ಟಿಸಿ ವಾಹನ ಹಾಗೂ ಪೊಲೀಸರು ನಿಯೋಜಿಸಲಾಗಿತ್ತು. ಅದು ಬಿಟ್ಟರೆ ಎಂದಿನಂತೆ ಶಾಲಾ-ಕಾಲೇಜುಗಳು, ಬಸ್ ಸಂಚಾರ, ಸರ್ಕಾರಿ ಕಚೇರಿ, ಅಂಗಡಿ-ಮುಗ್ಗಟ್ಟುಗಳು ಕಾರ್ಯನಿರ್ವಹಿಸಿದವು. ಖಾಸಗಿ ವಾಹನ ಗಳು, ಆಟೋಗಳು, ಪೆಟ್ರೋಲ್ ಬಂಕ್, ಚಿತ್ರ ಮಂದಿರ, ಬ್ಯಾಂಕ್, ಎಲ್‍ಐಸಿ, ಅಂಚೆ ಕಚೇರಿಗಳು ಕೆಲಸ ಮಾಡಿದವು.

‘ಬಿಜೆಪಿಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ’

ಮಸ್ಕಿ: ’ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಚುನಾವಣಾ ಪೂರ್ವದಲ್ಲಿ ಮೋದಿ ಅವರು ನೀಡಿದ್ದ ಯಾವ ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಜೆಡಿಎಸ್‌ ತಾಲ್ಲೂಕು ಅಮರೇಶ ಹಂಚಿನಾಳ ಟೀಕಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಪತ್ರಿಕೆ ಹೇಳಿಕೆ‌ ನೀಡಿರುವ ಅವರು, ‘ಬಿಜೆಪಿಯ ಇಂದಿನ ಪ್ರತಿಭಟನೆ ಅವರ ಕರಾಳ ಮುಖ‌ ಅನಾವರಣ ಮಾಡಿದಂತಿದೆ. ಬಿಜೆಪಿ ಮುಖಂಡರಿಗೆ ರೈತರ ಸಾಲಮನ್ನಾ ಮಾಡಿ ಎಂದು ಹೇಳುವ ನೈತಿಕತೆ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.