ADVERTISEMENT

ಸಿಂಧನೂರಿನ್ಲ್ಲಲೊಂದು ಅಪರೂಪದ ವಿವಾಹ

ವಧು-ವರರಿಂದ ಪ್ರತಿಜ್ಞಾವಿಧಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 11:04 IST
Last Updated 17 ಜೂನ್ 2013, 11:04 IST

ಸಿಂಧನೂರು: ಇಲ್ಲಿ ಮದುವೆಗೆ ಮಂತ್ರಘೋಷಗಳು ಇರಲಿಲ್ಲ, ವಧು-ವರರಿಗೆ ಹಾಕುವ ಅಕ್ಷತೆ ಇರಲಿಲ್ಲ, ಬಾಜ-ಭಜಂತ್ರಿಗಳ ಶಬ್ದ ಕೇಳಲಿಲ್ಲ,  ಬಾಸಿಂಗ, ದಂಡೆ, ಕಳಶಗಳ ಸುಳಿವಂತೂ ಕಾಣಲೇ ಇಲ್ಲ. ಹೀಗೊಂದು ವಿಶಿಷ್ಟ ರೀತಿಯ ವಿವಾಹ ಇಲ್ಲಿ ಭಾನುವಾರ ನಡೆಯಿತು.

ಈ ಎಲ್ಲ ಪರಿಕರಗಳಿಲ್ಲದೇ ಇಲ್ಲದಿದ್ದರೂ ವಿವಾಹ ಆಗಬಹುದೆನ್ನುವುದಕ್ಕೆ ಕುರುಕುಂದಿ ವೀರಭದ್ರಪ್ಪ, ಕರೇಗೌಡ ಪಾಟೀಲ್ ಮತ್ತು ಶೇಖರಪ್ಪ ಕಾನಿಹಾಳ ಅವರು ಸ್ಥಳೀಯ ಸತ್ಯಾ ಗಾರ್ಡನ್ಸ್‌ನಲ್ಲಿ ಈ ಮದುವೆ ಸಮಾರಂಭವೇ ಸಾಕ್ಷಿಯಾಯಿತು.

ಪರಸ್ಪರ ಬೀಗರು ಮಿನಿಯುವುದು, ಐರಾಣ ಸುತ್ತಿ, ಕಳಸ ಬೆಳಗಿ ಸಂಭ್ರಮಿಸುವ ಆಚರಣೆಗಳಿಲ್ಲದೆ ನೇರವಾಗಿ ವೇದಿಕೆ ಮೇಲೇರಿ ಸಾಂಪ್ರದಾಯಿಕವಾಗಿ ಮದುವೆಯಲ್ಲಿ ಕಟ್ಟುವ ಬ್ರಹ್ಮ ಗಂಟಿನ ಬದಲಾಗಿ ವಚನ ಗಂಟು, ಮಾಂಗಲ್ಯದ ಬದಲಾಗಿ ಪರಸ್ಪರ ರುದ್ರಾಕ್ಷಿ ಕಟ್ಟಿಕೊಂಡು ಪ್ರತಿಜ್ಞೆ ಮಾಡುವ ಮುಖಾಂತರ ವಧು-ವರರಾದ ಮಲ್ಲಿಕಾರ್ಜುನ-ಚಿನ್ಮಯಿ, ಗವಿಸಿದ್ದಪ್ಪ-ಅಶ್ವಿನಿ ಮತ್ತು ಗವಿಸಿದ್ಧನಗೌಡ-ವಾಣಿಶ್ರೀ  ಹೊಸ ಬಾಳಿನ ಹೊಸ್ತಿಲಿಗೆ ಕಾಲಿರಿಸಿದರು.

`ವ್ಯಕ್ತಿ ಮತ್ತು ಸಮಾಜದ ಉದ್ಧಾರಕ್ಕೆ ಹಿತವನ್ನು ತರುತ್ತೇವೆ. ಸಾತ್ವಿಕ ಧರ್ಮದೊಂದಿಗೆ ಪರಿಸರ ಪ್ರಜ್ಞೆ ಹಾಗೂ ಹಿತ-ಮಿತ ಕುಟುಂಬವನ್ನು ಅನುಷ್ಠಾನಕ್ಕೆ ತರುತ್ತೇವೆ.

ಅಜ್ಞಾನ, ಮೂಢನಂಬಿಕೆ, ಕಂದಾಚಾರವನ್ನು ದೂರವಿಟ್ಟು ಪರಧರ್ಮ, ಪರಸತಿ, ಪರಪತಿಗಳಿಂದ ದೂರವಿದ್ದು ದುರ್ನಡತೆ, ದುರಾಚಾರ, ದುಶ್ಚಟಗಳನ್ನು ಮೆಟ್ಟಿನಿಂತು, ಸದಾಚಾರ, ಅರಿವು, ಆಚಾರ ಸಂಪನ್ನರಾಗಿ ಸರ್ವ ಜೀವ ದಯಾಪರವಾಗಿ ಬದುಕು ನಡೆಸುತ್ತೇವೆಂದು ಬಸವಣ್ಣನ ಸಾಕ್ಷಿಯಾಗಿ ಹಾಗೂ ಗುರುಲಿಂಗ ಜಂಗಮ ಸಾಕ್ಷಿಯಾಗಿ, ಸಮಸ್ತ ಶರಣರ ಸಮಕ್ಷಮ ಪ್ರತಿಜ್ಞೆ ಮಾಡುತ್ತೇವೆ' ಎಂದು ವಧು ವರರು ಪ್ರತಿಜ್ಞೆ ಸ್ವೀಕರಿಸಿದರು.

ಈ ಮೂರು ಕುಟುಂಬಗಳು ಭಿನ್ನ ಜಾತಿಯವರಾಗಿದ್ದರೂ ಒಂದೇ ವೇದಿಕೆಯ ಕಲ್ಯಾಣ ಮಂಟಪದಲ್ಲಿ  ಸಹೋದರರಂತೆ ಮದುವೆ ನೆರವೇರಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಗದಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಬಸವ ತತ್ವ ಮತ್ತು ಭಾರತದ ಸಂವಿಧಾನದ ಆಶಯಗಳಲ್ಲಿ ಸಾಮ್ಯತೆ ಇದ್ದು. ಇದು ಎಲ್ಲ ಕಾಲ, ದೇಶ ಮತ್ತು ಜನಾಂಗಗಳ ಶ್ರೇಯಸ್ಸನ್ನು ಬಯಸುವುದಾಗಿದೆ. ಇದು ನಿಸರ್ಗಕ್ಕೆ ಪೂರಕವಾದ ಧರ್ಮವಾಗಿದೆ. ಅಲ್ಲದೇ ಈ ಕಾಲದ ಬೇಡಿಕೆಯೂ ಆಗಿದೆ ಎಂದರು.

ಬಸವ ತತ್ವದ ಆಧಾರದಲ್ಲಿ ನಡೆಯುವ ವಿವಾಹದಲ್ಲಿ ಹೋಮ-ಹವನಕ್ಕೆ ಬದಲಾಗಿ ಪುಷ್ಪವೃಷ್ಠಿ ಮಾಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಸಾಂಪ್ರದಾಯಿಕವಾಗಿ ಮಾಂಗಲ್ಯಧಾರಣೆ ಮತ್ತು ಪುರುಷನಿಗೆ ಸ್ತ್ರೀ ರುದ್ರಾಕ್ಷಿಧಾರಣೆ ಮಾಡುತ್ತಾಳೆ ಎಂದು ವಿವರಿಸಿದರು.

ಇಳಕಲ್ಲ ಮಹಾಂತ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ವಟಗಲ್ ಅರವಿನ ಮನೆಯ ಬಸವರಾಜ ದೇವರು, ಸಿದ್ದಯ್ಯಸ್ವಾಮಿ ಗುಡದೂರು, ಶೇಖರಪ್ಪ ಮೇಣೆದಾಳ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.