ADVERTISEMENT

ಸಿಂಧನೂರು ಕುಷ್ಟಗಿ ರಸ್ತೆ ಅಭಿವೃದ್ಧಿ:ರೂ. 136.5 ಕೋಟಿಗೆ ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:25 IST
Last Updated 20 ಅಕ್ಟೋಬರ್ 2012, 9:25 IST

ಮಸ್ಕಿ: ಸಂಪೂರ್ಣ ಹಾಳಾಗಿದ್ದ ಸಿಂಧನೂರು, ತಾವರಗೇರಾ, ಕುಷ್ಟಗಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಬೇಕಾಗುವ 136.5 ಕೋಟಿ ರೂಪಾಯಿ ಯೋಜನೆಗೆ ಗುಲ್ಬರ್ಗಾದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದ್ದಾರೆ.

ದೂರವಾಣಿ ಮೂಲಕ `ಪ್ರಜಾವಾಣಿ~ಗೆ ಈ ವಿಷಯ ತಿಳಿಸಿದರು. ಸಿಂಧನೂರಿನಿಂದ ಕುಷ್ಟಗಿವರೆಗಿನ ಸುಮಾರು 60 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮೂಲಕ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಿಂಧನೂರು ಕುಷ್ಟಗಿ ರಸ್ತೆ ಮಸ್ಕಿ ಕ್ಷೇತ್ರದಲ್ಲಿಯೇ ಹೆಚ್ಚು ಹಾದು ಹೋಗುತ್ತಿದೆ. ರಸ್ತೆ ಹಾಳಾಗಿದ್ದರಿಂದ ಈ ಭಾಗದಲ್ಲಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದರು ಎಂದರು. ಶೀಘ್ರದಲ್ಲಿಯೇ ಟೆಂಡರ್ ಕರೆಯುವ ಮೂಲಕ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಹಲವು ತಿಂಗಳಿನಿಂದ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲಾಗಿತ್ತು ಎಂದರು. ಈ ಭಾಗದ ಸಾರ್ವಜನಿಕರು ಸಹ ಬೀದಿಗೆ ಇಳಿದು ಅಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದರು.

ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟದಲ್ಲಿ ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸಿ.ಎಂ. ಉದಾಸಿ ಹಾಗೂ ಸಂಪುಟದ ಸಚಿವರಿಗೆ ಇದೇ ಸಂದರ್ಭದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಕೃತಜ್ಞತೆ ಸಲ್ಲಿಸಿದರು.

ದ್ವಿಪಥ ರಸ್ತೆ ನಿರ್ಮಾಣ : ಸಿಂಧನೂರು-ಕುಷ್ಟಗಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ಯೋಜನೆ ಇದು ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಕಾರ್ಯನಿರ್ವಾಹಕ ಅಭಿಯಂತರ ಅನೀಲಕುಮಾರ `ಪ್ರಜಾವಾಣಿ~ಗೆ ತಿಳಿಸಿದರು.

ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ 2.5 ಕೋಟಿ ರೂಪಾಯಿ ವೆಚ್ಚಮಾಡಿ ದ್ವಿಪಥ ರಸ್ತೆ ನಿರ್ಮಿಸುವ ಯೋಜನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಇದೀಗ ಸಚಿವ ಸಂಪುಟ ಅದಕ್ಕೆ ಒಪ್ಪಿಗೆ ನೀಡಿರುವುದರಿಂದ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಅನೀಲಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.