ADVERTISEMENT

ಸೀರೆ-ಬಾಂಡ್ ಯಾವಾಗ ಕೊಡ್ತೀರಿ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 8:05 IST
Last Updated 18 ಮಾರ್ಚ್ 2011, 8:05 IST

ರಾಯಚೂರು:  ಭಾಗ್ಯಲಕ್ಷ್ಮೀ ಯೋಜನೆ ಅಡಿ ಜಿಲ್ಲೆಯಲ್ಲಿ 38 ಸಾವಿರ ಸೀರೆ ವಿತರಣೆ ಮಾಡಲಾಗಿದ್ದು, 22 ಸಾವಿರ ಬಾಂಡ್ ವಿತರಣೆ ಆಗಬೇಕಿದೆ. ಸರ್ಕಾರ ದೊರಕಿಸಿದಾಗ ಅರ್ಹ ಫಲಾನುಭವಿಗಳಿಗೆ ಬಾಂಡ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ನಿರ್ದಿಷ್ಟವಾಗಿ ಈಗಲೇ, ಇಂಥದ್ದೇ ದಿನ ತಲುಪಿಸುತ್ತೇವೆ ಎಂದು ಹೇಳುವುದು ಕಷ್ಟ!

ಇಲ್ಲಿನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗುರುವಾರ  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರಾ ಬಷಿರುದ್ಧೀನ್ ಅಧ್ಯಕ್ಷೆಯಲ್ಲಿ ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಅವರು ಸದಸ್ಯ ಜಾಫರ್ ಪಟೇಲ್ ಅವರ ಪ್ರಶ್ನೆಗೆ ಉತ್ತರಿಸಿದರು.

ಅಧಿಕಾರಿ ಉತ್ತರಕ್ಕೆ ತೃಪ್ತರಾಗದ ಸದಸ್ಯರು, ಸೀರೆಗಳನ್ನೂ ಸಮರ್ಪಕವಾಗಿ ತಲುಪಿಸಿಲ್ಲ. ಬಾಂಡ್ ಗತಿಯೂ ಅದೇ ಆಗಿದೆ. ಗ್ರಾಮದ 100 ಜನರಲ್ಲಿ 50 ಜನರಿಗೆ ತಲುಪಿಸಿದ್ದರೆ ಇನ್ನರ್ಧ ಜನರಿಗೆ ಕೊಟ್ಟಿಲ್ಲ. ಇದು ತಾರತಮ್ಯ ಧೋರಣೆಗೆ ಕಾರಣವಾಗಿದೆ. ಸೀರೆ ಮತ್ತು ಬಾಂಡ್ ಯಾವಾಗ ಕೊಡ್ತೀರಿ ಹೇಳ್ರಿ ಎಂದು ಪಟ್ಟು ಹಿಡಿದರು.

ಸಿಡಿಪಿಒಗೆ ನೋಟಿಸ್: ಸ್ತ್ರೀ ಶಕ್ತಿ ಗುಂಪುಗಳ ಸದಸ್ಯೆಯರಿಗೆ ತಲಾ 10 ಸಾವಿರ ಸಹಾಯಧನ ನೆರವು ದೊರಕಿಸುವುದಾಗಿ ಹೇಳಿ ನದಿಗಡ್ಡೆ ಮಲ್ಕಾಪುರ ಗ್ರಾಮದಲ್ಲಿ ಸಭೆ ನಡೆಸಲಾಗಿದೆ. ಸುತ್ತು ನಿಧಿಯಡಿ 5 ಸಾವಿರ ಅನುದಾನ ದೊರಕಿಸುವ ಮಾಹಿತಿ ಗೊತ್ತಿದೆ. ಆದರೆ 10 ಸಾವಿರ ನೆರವು ಆಮಿಷವೊಡ್ಡಿ ಸ್ತ್ರೀ ಶಕ್ತಿ ಗುಂಪುಗಳನ್ನು ದಿಕ್ಕು ತಪ್ಪಿಸಲಾಗಿದೆ. ಸಿಡಿಪಿಒ ಅವರೇ ಈ ಸಭೆ ವ್ಯವಸ್ಥೆ ಮಾಡಿದ ಬಗ್ಗೆ ಮಾಹಿತಿ ಇದೆ ಎಂದು ಪಟೇಲ್ ಪ್ರಶ್ನಿಸಿದರು.

ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಹೇಳಿದರು. ಮೇಲಾಧಿಕಾರಿಗಳ ಗಮನಕ್ಕೆ ತರದೇ ಈ ರೀತಿ ಸಭೆ ನಡೆಸಿ ಗೊಂದಲ ಸೃಷ್ಟಿಸಿದ ಕಾರಣಕ್ಕೆ ಸಿಡಿಪಿಒ ಅವರಿಗೆ ನೋಟಿಸ್ ಜಾರಿಗೊಳಿಸಿ ಎಂದು ಜಿಪಂ ಸಿಇಓ ಅವರು ಆದೇಶಿಸಿದರು.

ಕುಡಿಯುವ ನೀರಿನ ಸಮಸ್ಯೆ: ದಶಕದ ಹಿಂದಿನ ಯೋಜನೆಯಾದ ದೇವದುರ್ಗ ತಾಲ್ಲೂಕು ಸಲಿಕ್ಯಾಪುರ ಗ್ರಾಮಕ್ಕ ಕುಡಿಯುವ ನೀರು ಪೂರೈಕೆ ಯೋಜನೆ ಸೇರಿದಂತೆ ಅರೆಬರೆ ಇರುವ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಭೆ ಗಮನ ಸೆಳೆದರು.

ಸಲಿಕ್ಯಾಪುರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಮಂದಗತಿ ಸಾಗಿದುದರ ಬಗ್ಗೆ ಸದಸ್ಯ ಪ್ರಕಾಶ ಜೇರಬಂಡಿ ಗಮನ ಸೆಳೆದರೆ, ಕುಡಿಯುವ ನೀರು ಸಂಗ್ರಹಕ್ಕೆ ಕವಿತಾಳ ಸಮೀಪ 80 ಲಕ್ಷ ರೂ ಮೊತ್ತದಲ್ಲಿ ಕೆರೆ ನಿರ್ಮಾಣ ಕಾಮಗಾರಿ ಪೈಪ್‌ಲೈನ್ ಅವ್ಯವಸ್ಥೆ, ತಾಂತ್ರಿಕ ವರ್ಗ ದೂರದೃಷ್ಟಿ ಕೊರತೆ ಬಗ್ಗೆ ಸದಸ್ಯ ವಿಶ್ವನಾಥ ತರಾಟೆಗೆ ತೆಗೆದುಕೊಂಡರು. ಪೈಪ್ ಲೈನ್ ಬದಲಾವಣೆ ಮಾಡಿಕೊಡಬೇಕು. ಕಾಟಾಚಾರದ ಕಾಮಗಾರಿ ಬೇಡ ಎಂದು ಎಚ್ಚರಿಸಿದರು.

ಶಾಲಾ ಮಕ್ಕಳ ಶಿಕ್ಷಣ ಏಳ್ಗೆಗೆ ಸರ್ಕಾರ ಮಧ್ಯಾಹ್ನದ ಬಿಸಿ ಊಟ ಯೋಜನೆ, ಪಠ್ಯ ಪುಸ್ತಕ, ಸೈಕಲ್ ಹೀಗೆ ಹಲವು ಯೋಜನೆಯಡಿ ಸಹಾಯ ಮಾಡುತ್ತಿದೆ. ಆದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಪೂರ್ವಭಾವಿ ಸಿದ್ಧತಾ ಪರೀಕ್ಷೆಗೆ ತಲಾ 75 ರೂ ವಸೂಲಿ ಕ್ರಮ ಸರಿಯಲ್ಲ ಎಂದು ಸದಸ್ಯ ಅಸ್ಲಂ ಪಾಷಾ ಅವರ ಅಭಿಪ್ರಾಯಕ್ಕೆ ಸದಸ್ಯ ಭೂಪನಗೌಡ ಸೇರಿದಂತೆ ಹಲವಾರು ಸದಸ್ಯರು ಬೆಂಬಲಿಸಿದರು.

ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನ ಬಿಸಿ ಊಟ ಯೋಜನೆಯಡಿ ಶಾಲೆಗೆ ಸಿಲಿಂಡರ್ ಸಮರ್ಪಕ ಪೂರೈಕೆ ಆಗುತ್ತಿಲ್ಲ. ಅನೇಕ ಕಡೆ ಉರುವಲು ಕಟ್ಟಿಗೆ ಬಳಸಲಾಗುತ್ತಿದೆ. ಕೆಲ ಕಡೆ ಅಡುಗೆ ಅನಿಲ ಸಿಲಿಂಡರ್ ಪೂರೈಸಿದರೂ ಬೇರೆ ಕಡೆ  ಸಾಗಿಸುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಕೂಡಲೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತುರವಿಹಾಳ ಸದಸ್ಯೆ ಬಸಮ್ಮ ಕುಂಟೋಜಿ ಸಭೆಯ ಗಮನಕ್ಕೆ ತಂದರು.

ಶೌಚಾಲಯ- ನೀರಿನ ಸಮಸ್ಯೆ: ಜಿಲ್ಲೆಯ ಶಾಲೆಗಳಲ್ಲಿ ಶೌಚಾಲಯ ಮತ್ತು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ ಸದಸ್ಯರು ಈ ಬಗ್ಗೆ ಸಮಗ್ರ ವಿವರವನ್ನು ಕೋರಿದರು.
ಉತ್ತರಿಸಿದ ಡಿಡಿಪಿಐ ಬೆಟ್ಟದ್ ಅವರು, ಜಿಲ್ಲೆಯ 398 ಶಾಲೆಯಲ್ಲಿ ಶೌಚಾಲಯಗಳಿಲ್ಲ. 643 ಶಾಲೆಗಳಿಗೆ ನೀರಿನ ಸೌಕರ್ಯವಿಲ್ಲ. ಬೇರೆ ಕಡೆಯಿಂದ ನೀರು ಪಡೆಯುವ ವ್ಯವಸ್ಥೆ ಇದೆ. ಇದನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಸದ್ಯ 438 ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಅನುದಾನ ಬಿಡುಗಡೆ ಆಗಿದೆ. 290 ಕಾಮಗಾರಿ ಪೂರ್ಣಗೊಂಡಿವೆ ಎಂದು ವಿವರಿಸಿದರು.

ಲಿಂಕ್ ಡಾಕುಮೆಂಟ್ ವ್ಯವಸ್ಥೆಯಡಿ ನಬಾರ್ಡ್‌ನಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ 4.71 ಕೋಟಿ ಅನುದಾನ ದೊರಕಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಈ ಅನುದಾನವನ್ನು ಬಳಸಬಾರದು ಎಂದು ಸರ್ಕಾರ ಆದೇಶಿಸಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ಬಳಿಕ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ. ಶಾಲಾ ಕಟ್ಟಡ ನಿರ್ಮಾಣ ಅವಶ್ಯ ಆಗಿದ್ದುದರಿಂದ ಬಳಸಿಕೊಳ್ಳಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಪತ್ರ ಬರೆಯಬೇಕಿದ್ದು ಇಂದಿನ ಸಭೆ ಇದರ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದು ಜಿಪಂ ಸಿಇಒ ವಿಜಯಕುಮಾರ ಕೋರಿದರು.

ಸದಸ್ಯರು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು. ಯಾವುದೇ ಕಾರಣಕ್ಕೂ ಅನುದಾನ ವಾಪಸ್ ಕಳುಹಿಸುವುದು ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಪಿಐ ಅಮೃತ ಬೆಟ್ಟದ್ ಅವರು, ಈ 4.71 ಕೋಟಿ ಅನುದಾನದಲ್ಲಿ ಜಿಲ್ಲೆಯಲ್ಲಿ ಒಟ್ಟು 94 ಶಾಲಾ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗ ಇಲಾಖೆ, ನಿರ್ಮಿತಿ ಕೇಂದ್ರ ಅಧಿಕಾರಿಗಳು ಸಮರ್ಪಕ ಮಾಹಿತಿ ಪತ್ರ ಒದಗಿಸದೇ ಇರುವುದಕ್ಕೆ ಸದಸ್ಯರಾದ  ಡಿ ಅಚ್ಯುತರೆಡ್ಡಿ, ಜಾಫರ್ ಪಟೇಲ್ ಅವರು ಸಭೆ ಗಮನಕ್ಕೆ ತಂದರು. ಮುಂಬರುವ ದಿನಗಳಲ್ಲಿ ಈ ರೀತಿ ಅಚಾತುರ್ಯ  ಆಗದಂತೆ ನೋಡಿಕೊಳ್ಳಲು ಜಿಪಂ ಸಿಇಒ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಬೇಕು, ನಾರಾಯಣಪುರ ಬಲದಂಡೆ ಕಾಲುವೆ 95ರಿಂದ 157ರವರೆಗೆ ನಿರ್ಮಾಣ ಕಾಮಗಾರಿ ಮುಂದುವರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ನಿರ್ಧಾರ ಕೈಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.