
ರಾಯಚೂರು: ಹಗಲು ರಾತ್ರಿ ಎನ್ನದೇ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡುತ್ತಿದ್ದ ಆರೋಪದಡಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (ಸಿಎಸ್‌ಎಎಂ) ಸೈಬರ್ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.
ವೆಬ್‌ಸೈಟ್‌ನಲ್ಲಿ ಸದಾ ಅಶ್ಲೀಲ ವಿಡಿಯೊಗಳನ್ನೇ ವೀಕ್ಷಣೆ ಮಾಡುತ್ತಿದ್ದ ಯುವಕನ ‘ಕಾಮದಾಹ’ವನ್ನು ಕಂಡು ಪೊಲೀಸರೂ ದಂಗಾಗಿದ್ದಾರೆ.
ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುವ ಚಿತ್ರಗಳು, ವಿಡಿಯೊಗಳ ಅಪ್ಲೋಡ್, ಹಂಚಿಕೆ ಹಾಗೂ ವೀಕ್ಷಿಸುವುದು ಸಿಎಸ್‌ಎಎಂ ಸೈಬರ್ ಕಾಯ್ದೆ ಪ್ರಕಾರ ಕಾನೂನು ಬಾಹಿರವಾಗಿದೆ. ಇದನ್ನು ತಡೆಯಲು ತಂತ್ರಜ್ಞಾನ ಕಂಪನಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಸೈಬರ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಈ ಯುವಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ವೆಬ್‌ಸೈಟ್‌ನಲ್ಲಿ ಲಿಂಕ್ ಆಗಿರುವ ಇಮೇಲ್ ಹಾಗೂ ಮೊಬೈಲ್ ನಂಬರ್ ಪರಿಶೀಲಿಸಿದಾಗ ಯುವಕನ ಕೃತ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಿದ ಬಳಿಕ ಯುವಕ ಮೊಬೈಲ್‌ನಲ್ಲಿ ಹಿಸ್ಟರಿ ಅಳಿಸಿ ಹಾಕುತ್ತಿದ್ದ. ಆದರೆ, ವೆಬ್‌ಸೈಟ್‌ನಲ್ಲಿ ಯುವಕ ನೋಡಿದ ವಿಡಿಯೊಗಳು ದತ್ತಾಂಶದಲ್ಲಿ ದಾಖಲಾಗಿವೆ. ಪೊಲೀಸರು ವಿಚಾರಣೆ ನಡೆಸಿ ಖಾತರಿ ಪಡಿಸಿಕೊಂಡು ಆತನ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
‘ವೆಬ್‌ಸೈಟ್‌ಗಳಲ್ಲಿ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಅಪ್ಲೋಡ್ ಮಾಡುವುದು ಎಷ್ಟು ಅಪರಾಧವೋ, ಅದನ್ನು ನೋಡುವುದೂ ಅಷ್ಟೇ ದೊಡ್ಡ ಅಪರಾಧ. ಕೇಂದ್ರ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ರಾಯಚೂರಿನ ವ್ಯಕ್ತಿಯೊಬ್ಬ ಅಶ್ಲೀಲ ದೃಶ್ಯಗಳನ್ನು ಹೆಚ್ಚು ವೀಕ್ಷಣೆ ಮಾಡಿದ್ದನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆಗೊಂಡಿದ್ದಾರೆ’ ಎಂದು ಸೈಬರ್ ಕ್ರೈಂ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಯಾವುದೇ ತರಹದ ಅಶ್ಲೀಲ ವಿಡಿಯೊ ನೋಡುವುದು ಸಹ ಅಪರಾಧವೇ ಆಗಿದೆ. ಹೀಗಾಗಿ ಪೋಷಕರು ಮಕ್ಕಳ ಮೇಲೆ ನಿಗಾ ಇಡಬೇಕುವೆಂಕಟೇಶ ಹೊಗಿಬಂಡಿ, ಸೈಬರ್ ಕ್ರೈಂ ಡಿವೈಎಸ್‌ಪಿ
ಅಪರಾಧಕ್ಕೆ ಗರಿಷ್ಠ 5 ವರ್ಷ ಶಿಕ್ಷೆ
ಸಿಎಸ್‌ಎಎಂ ಸೈಬರ್ ಕ್ರೈಂ ಕಾಯ್ದೆಯಡಿ ಮೊದಲ ಅಪರಾಧ ಸಾಬೀತಾದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಎರಡನೇ ಅಥವಾ ನಂತರದ ಅಪರಾಧ ಸಾಬೀತಾದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಲು ಕಾಯ್ದೆಯಡಿ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.