ರಾಯಚೂರು: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಕಲ್ಪಿಸಿದರೂ ಅದನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವೇ ಅನೇಕ ಗೊಂದಲ ಸೃಷ್ಟಿ ಮಾಡುತ್ತಿದೆ. ಈ ಭಾಗದ ಯುವ ಸಮುದಾಯ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಜನಸಂಗ್ರಾಮ ಪರಿಷತ್‌ನ ಮುಖಂಡ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳದ 2ನೇ ಗೋಷ್ಠಿಯಲ್ಲಿ `ವರ್ತಮಾನ ತಲ್ಲಣಗಳು' ಎಂಬ ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ಹೋರಾಟದ ಬಗ್ಗೆ ಮಾಹಿತಿ ಇಲ್ಲದವರನ್ನು ಕಾನೂನು ರೂಪಿಸುವ ಉದ್ದೇಶದಿಂದ ರಚಿಸಿರುವ ಸಂಪುಟ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಜನರಿಗೆ ಆರೋಗ್ಯಕ್ಕೆ ಪೂರಕವಾಗುವ ಯೋಜನೆಗಳನ್ನು ರೂಪಿಸುತ್ತಿಲ್ಲ. ಆರೋಗ್ಯ ಕ್ಷೇತ್ರದ ಉದ್ಯಮವಾಗಿ ಪರಿವರ್ತನೆಗೊಂಡಿದ್ದು, ಜನರ ಆರೋಗ್ಯದ ಬಗ್ಗೆ ಸರ್ಕಾರಗಳು ಗಮನಹರಿಸುತ್ತಿಲ್ಲ. ವೈದ್ಯರನ್ನು ಔಷಧಿ ಉತ್ಪಾದನಾ ಕಂಪೆನಿಗಳು ನಿಯಂತ್ರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಪಾದಿಸಿದರು.
ಸಂವಿಧಾನದ 371ನೇ ಕಲಂ ಜಾರಿಗೆ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಅದರ ಕಾನೂನುಗಳ ಜಾರಿಗೂ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 371(ಜೆ) ಕಲಂ ಜಾರಿಯಿಂದ ಈ ಭಾಗದ ಯುವಕರಿಗೆ ಹೆಚ್ಚು ಅನುಕೂಲ. ಹೀಗಾಗಿ ಆ ಯುವ ಸಮುದಾಯವೇ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಪ್ರದೇಶದ ಜ್ವಲಂತ ಸಮಸ್ಯೆಗಳ ಕುರಿತು ಮನವರಿಕೆ ಮಾಡುವ ನಿಟ್ಟಿನಲ್ಲಿ ಜುಲೈ 6ರಂದು ಸಚಿವ ಎಚ್.ಕೆ ಪಾಟೀಲ್ ಅವರನ್ನು ಆಹ್ವಾನಿಸಲಾಗುವುದು. ಈ ಭಾಗದ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದ ರೈತರು ಅಕ್ರಮವಾಗಿ ಬೆಳೆ ಪ್ರದೇಶವನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ. ಅನಧಿಕೃತವಾದ ಕೆರೆಗಳಲ್ಲಿ ನೀರು ಸಂಗ್ರಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಯಚೂರು ತಾಲ್ಲೂಕಿನ ಕೆಳಭಾಗದ ರೈತರ ಜಮೀನುಗಳಿಗೆ ನೀರಿಲ್ಲದಂತಾಗಿದೆ.ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯಕಾರಣ ಎಂದು ಸಮಸ್ಯೆ ವಿವರಿಸಿದರು.
`ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು -ಕಾರಣ ಮತ್ತು ಪರಿಹಾರ' ಎಂಬ ವಿಷಯ ಕುರಿತು ಡಾ. ಸುರೇಶ್ ವಿ.ಸಗರದ, `ಕೃಷಿ ನೀರಾವರಿ ಮತ್ತು ವಿದ್ಯುತ್ ಬಿಕ್ಕಟ್ಟುಗಳು' ಎಂಬ ಕುರಿತು ಪತ್ರಕರ್ತ ಕೆ.ಸತ್ಯನಾರಾಯಣ, `371ನೇ ಕಲಂ ಸಮರ್ಪಕ ಅನುಷ್ಠಾನ-ನಮ್ಮ ಪಾತ್ರ' ಎಂಬ ವಿಷಯ ಕುರಿತು ಡಾ.ರಜಾಕ್ ಉಸ್ತಾದ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.