ADVERTISEMENT

6ನೇ ವೇತನ ಆಯೋಗ ಶಿಫಾರಸು ಅನುಸರಿಸಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:45 IST
Last Updated 7 ಫೆಬ್ರುವರಿ 2011, 10:45 IST

ರಾಯಚೂರು: ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಈಗಾಗಲೇ ನಿಗದಿಪಡಿಸಿ ಘೋಷಿಸಿರುವ 6ನೇ ವೇತನ ಆಯೋಗದ ಮಾದರಿಯನ್ನೇ ರಾಜ್ಯ ಸರ್ಕಾರಿ ನೌಕರರು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಸೇರಿದಂತೆ 7 ಲಕ್ಷ ನೌಕರರಿಗೆ ರಾಜ್ಯ ಅನ್ವಯಿಸಬೇಕು. ಮತ್ತೊಂದು ಆಯೋಗ ರಚನೆ ಮಾಡುವುದು, ವರದಿ ಪಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲೇಬಾರದು ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ ಪುಟ್ಟಸಿದ್ಧಶೆಟ್ಟಿ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಚೆಗೆ 5ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಸಮಾಧಾನವಿದೆ. ಆದರೆ, ಈಗ ಮತ್ತೆ 6ನೇ ವೇತನ ಆಯೋಗ ರಚನೆ ಮಾಡಿ ವರದಿ ಪಡೆಯುವುದು ಬೇಡ. ಕೇಂದ್ರ ಸರ್ಕಾರದ ಆಯೋಗದ ವರದಿಯನ್ನೇ ಅನುಸರಿಸಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ಬಿಸಿಗೆ ಶಿಕ್ಷಕರು, ನೌಕರ ವರ್ಗ ತತ್ತರಿಸಿದೆ. ವೇತನ ಮತ್ತು ಭತ್ಯೆ ಹೆಚ್ಚಳ ಮಾಡಬೇಕು. ಬೆಲೆ ಏರಿಕೆ ಎಂಬುದು ಕೇಂದ್ರ ಸರ್ಕಾರಿ ನೌಕರರಿಗೆ, ರಾಜ್ಯ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಏನೂ ಇರುವುದಿಲ್ಲ. ಹೀಗಾಗಿ ಕೇಂದ್ರದ 6ನೇ ವೇತನ ಆಯೋಗದ ವರದಿಯನ್ನೇ ಅನುಸರಿಸಬೇಕು ಎಂಬುದು ಸಂಘಟನೆ ಒತ್ತಾಯವಾಗಿದೆ ಎಂದರು.
ಪ್ರೌಢ ಶಾಲಾ ಸಹ ಶಿಕ್ಷಕರು, ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನ ನಿಗದಿಯಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ. ಈ ವೇತನ ತಾರತಮ್ಯ ಹೋಗಲಾಡಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆ ಮತ್ತು ನೇಮಕಾತಿ ಕುರಿತು ವೈದ್ಯನಾಥನ್ ಸಮಿತಿ ನೀಡಿದ ವರದಿಯನ್ನು ಜಾರಿಗೆ ತರಬೇಕು ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ-ಕಾರ್ಯದರ್ಶಿ ವಜಾ: ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಆಧ್ಯಕ್ಷ ಬಾಬು ಭಂಡಾರಿಗಲ್ ಹಾಗೂ ಕಾರ್ಯದರ್ಶಿ ರಾಜಶೇಖರ ದಿನ್ನಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದೆ. ಹೊಸಬರನ್ನು ನೇಮಕ ಮಾಡಲಾಗುವುದು. ಹೊಸ ಸಮಿತಿಯೇ ರಚನೆಗೊಳ್ಳಲಿದೆ ಎಂದು ತಿಳಿಸಿದರು. ಸಂಘದ ಈ ಜಿಲ್ಲಾ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಯಾವುದೇ ರೀತಿ ಲೆಕ್ಕಪತ್ರ, ಮಾಸಿಕ ವರದಿ ಸೇರಿದಂತೆ ಯಾವುದೇ ರೀತಿಯನ್ನು ರಾಜ್ಯ ಘಟಕಕ್ಕೆ ಒದಗಿಸಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.