ರಾಯಚೂರು: ತಾಲ್ಲೂಕಿನ ಯರಗೇರಾ ಸಮೀಪ ರಾಯಚೂರು ವಿಶ್ವವಿದ್ಯಾಲಯ ಆವರಣದ ಮುಂಭಾಗ ನಿರ್ಮಿಸಿದ ಬಸ್ ತಂಗುದಾಣ ಸಂಪೂರ್ಣ ಹಾಳಾಗಿದೆ.
ರಸ್ತೆ ಬದಿಗೆ ಇನ್ನೊಂದು ಬಸ್ ತಂಗುದಾಣವಿದ್ದರೂ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಕ್ಯಾಂಪಸ್ ಒಳಗಡೆ ಬಸ್ ತಂಗುನಿಲ್ದಾಣವೇ ಇಲ್ಲದ ಕಾರಣ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಬಿಸಿಲಲ್ಲೆ ನಿಂತು ತೊಂದರೆ ಅನುಭವಿಸಬೇಕಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಹಿಂದೆ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಮಂತ್ರಾಲಯ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ರಸ್ತೆ ಎತ್ತರಿಸಲಾಗಿದೆ. ಹೀಗಾಗಿ ಬಸ್‌ತಂಗುದಾಣ ಅರ್ಧ ನೆಲದಲ್ಲಿ ಹೂತು ಹೋಗಿದೆ.
ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಗೊತ್ತಿದ್ದರೂ ಅಲ್ಲಿ ಸುಸಜ್ಜಿತವಾದ ಹೊಸ ಬಸ್ ತಂಗುದಾಣ ನಿರ್ಮಾಣ ಮಾಡಿಲ್ಲ. ಒಂದು ಬದಿಗೆ ಶೆಡ್ ನಿರ್ಮಿಸಿದರೂ ನಿರ್ವಹಣೆ ಇಲ್ಲದ ಕಾರಣ ಅದೂ ಹಾಳಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಹೊಸ ಬಸ್ ತಂಗುದಾಣ ನಿರ್ಮಿಸಲು ಅವಕಾಶ ಇದೆ. ಆದರೆ, ಚುನಾಯಿತ ಪ್ರತಿನಿಧಿಗಳೂ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ.
ವಿಶ್ವವಿದ್ಯಾಲಯದಲ್ಲಿ ಎರಡು ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಯಚೂರು, ಸಿಂಧನೂರು, ಲಿಂಗಸುಗೂರು, ಮಾನ್ವಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾತ್ರ ಬಸ್ ಇವೆ. ಇನ್ನುಳಿದ ಸಮಯದಲ್ಲಿ ಮುಖ್ಯರಸ್ತೆಗೆ ಬಂದು ಬಸ್‌ಗಾಗಿ ಕಾಯಬೇಕಾದ ಸ್ಥಿತಿ ಇದೆ.
‘ವಿಶ್ವವಿದ್ಯಾಲಯದ ಆವರಣದೊಳಗೆ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯಲು ಒಂದು ಒಳ್ಳೆಯ ಬಸ್‌ತಂಗುದಾಣವಿಲ್ಲ. ಬೇಸಿಗೆಯಲ್ಲಿ ಸುಡು ಬಿಸಿಲು ಹಾಗೂ ಮಳೆಗಾಲದಲ್ಲಿ ಮಳೆ ಎದುರಿಸಬೇಕಾಗಿದೆ. ಕನಿಷ್ಠ ಪಕ್ಷ ಜಿಲ್ಲಾಡಳಿತವಾದರೂ ಬಸ್ ತಂಗುದಾಣ ನಿರ್ಮಿಸಿಕೊಡಬೇಕು’ ಎಂದು ವಿದ್ಯಾರ್ಥಿಗಳಾದ ದೇವೇಂದ್ರ ಹಾಗೂ ಸರಸ್ವತಿ ಮನವಿ ಮಾಡುತ್ತಾರೆ.
‘ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಂತ್ರಾಲಯ ಹಾಗೂ ದೂರದ ಮಾರ್ಗದ ಬಸ್‌ಗಳ ನಿಲುಗಡೆಗೂ ಅನುಮತಿ ಕೊಡಬೇಕು. ಇದರಿಂದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿ, ಅರಣ್ಯ ಇಲಾಖೆಯ ನರ್ಸರಿ ಸಿಬ್ಬಂದಿ, ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ’ ಎಂದು ವಿದ್ಯಾರ್ಥಿ ವೀರೇಶ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.